ಬೀಜಿಂಗ್:ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಬೆನ್ನಲ್ಲೇ ಈಗ ಅಮೆರಿಕ ಹಾಗೂ ಚೀನಾ ನಡುವೆ ವಾಕ್ ಸಮರ ಕಾರಣವಾಗಿದ್ದು, ಅಮೆರಿಕಾ ಸೇನೆಯಿಂದಲೇ ವುಹಾನ್‌ನಲ್ಲಿ ಕೊರೊನಾ ವೈರಸ್ ಹಬ್ಬಿದೆ ಎಂದು ಚೀನಾ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲರಿಗೂ ತಿಳಿದಿರುವ ಹಾಗೆ ಕೊರೊನಾ ವೈರಸ್ ಮೊದಲು ಚೀನಾದ ವ್ಯೂಹಾನ್ನಲ್ಲಿ ಪತ್ತೆಯಾಗಿತ್ತು. ಆದರೆ ವುಹಾನ್‌ನಲ್ಲಿ ಅಮೆರಿಕ ಸೇನೆಯಿಂದಲೇ ಮೊದಲ ಬಾರಿಗೆ ವೈರಸ್ ಹಬ್ಬಿದೆ ಎಂದು ಆರೋಪಿಸಲಾಗಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೆಂದ್ರದ (CDC) ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಡ್ ಅವರೇ ಅಲ್ಲಿ ಕೆಲ ಜ್ವರ ಹೊಂದಿರುವ ರೋಗಿಗಳು ಕಂಡುಬಂದಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಚೀನಾ ಆರೋಪಿಸಿದೆ.
ಅಮೆರಿಕದಾದ್ಯಂತ ವೈರಸ್ ಹರಡುತ್ತಿದ್ದರೂ, ಆ ಬಗ್ಗೆ ಮಾಹಿತಿ ಮರೆಮಾಚುವ ಪ್ರಯತ್ನಗಳು ಅಮೆರಿಕದಿಂದ ನಡೆಯುತ್ತಿವೆ. ಅಲ್ಲದೆ ಇತರ ದೇಶಗಳ ಮೇಲೇ ಆಪಾದನೆ ಹೊರೆಸುವ ಕಾರ್ಯ ನಡೆಯುತ್ತಿದೆ ಎಂದು ಚೀನಾ ಆರೋಪ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಜಾಹೋ ಲಿಜಾನ್, ಅಮೆರಿಕವು ವೈರಸ್ ಹಬ್ಬಿಸಿ ನಮ್ಮ ಆರ್ಥಿಕತೆಗೆ ಪೆಟ್ಟು ನೀಡಲು ಹವಣಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.'ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೆಂದ್ರ ನೇರವಾಗಿ ಸಿಕ್ಕಿಬಿದ್ದಿದೆ. ಯುಎಸ್ಲ್ಲಿ ರೋಗಿಗಳಿಲ್ಲ ಎಂಬುದು ಯಾವಾಗ ಆರಂಭವಾಯಿತು? ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ? ಆಸ್ಪತ್ರೆಗಳ ಹೆಸರುಗಳು ಯಾವವು? ವುಹಾನ್ಗೆ ಯುಎಸ್ ಸೈನ್ಯವು ಯಾವಾಗ ವೈರಸ್ ತಂದಿರಬಹುದು. ಪಾರದರ್ಶಕವಾಗಿರಿ! ನಿಮ್ಮ ಡೇಟಾವನ್ನು ಬಹಿರಂಗಗೊಳಿಸಿ. ಅಮೆರಿಕ ನಮಗೆ ವಿವರಣೆ ನೀಡಬೇಕಿದೆ' ಎಂದು ಟ್ವೀಟ್ ಮೂಲಕ ಲಿಜಾನ್ ಆಗ್ರಹಿಸಿದ್ದಾರೆ.
'ವೈರಸ್ ಎಲ್ಲಿ ಹುಟ್ಟಿತು ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಅದರ ಮೂಲ ಎಲ್ಲಿಯೇ ಇರಲಿ, ಚೀನಾ ಮತ್ತು ಇತರ ಎಲ್ಲ ಪೀಡಿತ ದೇಶಗಳು ಅದರ ಹರಡುವಿಕೆಯನ್ನು ಒಳಗೊಂಡಿರುವ ಸವಾಲನ್ನು ಎದುರಿಸುತ್ತಿವೆ' ಎಂದು ಜಾಹೋ ಕಿಡಿಕಾಡಿದ್ದಾರೆ.