ಬೀಜಿಂಗ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗೆ ಅಂತಾರಾಷ್ಟ್ರೀಯ ಕಟ್ಟುಪಾಡುಗಳನ್ನು ತಪ್ಪಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಚೀನಾ ಆರೋಪಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯವು, WHOಗೆ ತನ್ನ ಸಂಪೂರ್ಣ ಕೊಡುಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಅಂತಾರಾಷ್ಟ್ರೀಯ ಏಜೆನ್ಸಿಯ ಪ್ರತಿಯೊಬ್ಬ ಸದಸ್ಯರ ಬಾಧ್ಯತೆಯಾಗಿದೆ ಎಂದು ಒತ್ತಿ ಹೇಳಿದೆ.
ಮುಂದಿನ 30 ದಿನಗಳಲ್ಲಿ ಪ್ರಮುಖ ಸುಧಾರಣೆಗಳಿಗೆ ಬದ್ಧರಾಗದಿದ್ದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗೆ ಧನಸಹಾಯ ನೀಡುವುದನ್ನು ಅಮೆರಿಕ ಸಂಪೂರ್ಣವಾಗಿ ನಿಲ್ಲಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಯುಎಸ್ ಅಧ್ಯಕ್ಷರು, 'ಚೀನಾ ಕೇಂದ್ರಿತ' ನೀತಿಗಳ ಮೇಲೆ WHO ಗೆ ನೀಡುತ್ತಿರುವ ಹಣವನ್ನು ಸ್ಥಗಿತಗೊಳಿಸಿದರು.
ವೈರಸ್ ಮೊದಲು ಪತ್ತೆಯಾದ ಚೀನಾದ ವುಹಾನ್‌ನಲ್ಲಿನ ಪ್ರಯೋಗಾಲಯದಿಂದ ಕೊರೊನಾ ವೈರಸ್ ಹುಟ್ಟಿಕೊಂಡಿರಬಹುದು ಎಂದು ಟ್ರಂಪ್ ಮತ್ತು ಅವರ ಆಡಳಿತದ ಹಲವಾರು ಸದಸ್ಯರು ಹೇಳಿದ್ದಾರೆ.