ಕಾಬೂಲ್: ಅಮೆರಿಕ ತನ್ನ ಸೇನೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದ ನಂತರ ತಾಲಿಬಾನ್ ಉಗ್ರರಿಗೆ ದೇಶ ಅನಾಯಾಸವಾಗಿ ದಕ್ಕಿದೆ. ಇಡೀ ದೇಶ ಉಗ್ರರ ಕೈಸೇರಿದ ಬಳಿಕ ಮಹಿಳೆಯರ ವಿಚಾರವಾಗಿ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕ ಮೂಡಿಸಿವೆ.
ಅಫ್ಘನ್ನ ರಾಜಕೀಯ ಮತ್ತು ಅಧಿಕಾರದಲ್ಲಿ ಮಹಿಳೆಯರು ಭಾಗಿಯಾಗಬಹುದು ಎಂದು ತಾಲಿಬಾನ್ ವಕ್ತಾರ ನಿನ್ನೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾನೆ. ಆದರೆ ಅದರ ಹೊರತಾಗಿಯೂ ಇಲ್ಲಿನ ಮಹಿಳೆಯರು ತಾಲಿಬಾನಿಗಳನ್ನು ನಂಬಲು ಸುತರಾಂ ತಯಾರಿಲ್ಲ. ಇದಕ್ಕೆ ಕಾರಣ ಎರಡು ದಶಕಗಳ ಹಿಂದೆ ಆಳ್ವಿಕೆ ನಡೆಸಿದ್ದ ತಾಲಿಬಾನಿನ ಘನಘೋರ ಇತಿಹಾಸ.
'ತಾಲಿಬಾನ್ಗಳ ಭಯದಲ್ಲಿ ನಾನು ಮತ್ತು ನನ್ನ ಸಹೋದರಿ ಇತ್ತೀಚೆಗೆ ಮಾರುಕಟ್ಟೆಗೆಂದು ತೆರಳಿದೆವು. ಆ ಸಂದರ್ಭದಲ್ಲಿ ನಾವು ಕೂದಲನ್ನು ಸಡಿಲವಾಗಿಸಿ, ಸ್ಕಾರ್ಫ್ನಿಂದ ಸರಳವಾಗಿ ಮುಖವನ್ನು ಮುಚ್ಚಿಕೊಂಡು ಹೋಗಿದ್ದೆವು. ಈ ವೇಳೆ ತಾಲಿಬಾನ್ ಉಗ್ರರು ಬೀರಿದ ನೋಟ ಭಯವನ್ನುಂಟು ಮಾಡಿತ್ತು. ಆದರೆ ನಮಗೆ ಅವರು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿಲ್ಲ' ಎಂದು ಅಫ್ಘನ್ನ ಸಹೋದರಿಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಶಾಲೆಗೆ ಮರಳಿದ ಹೆಣ್ಣುಮಕ್ಕಳು:
ಇನ್ನೊಂದೆಡೆ, ದೇಶದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌ನಲ್ಲಿ ಹೆಣ್ಣು ಮಕ್ಕಳು ಬಾಲಕರ ಜೊತೆಗೂಡಿ ಶಾಲೆಗಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹಿಜಾಬ್ ಮತ್ತು ಸ್ಕಾರ್ಫ್ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ತಾಲಿಬಾನ್‌ಗಳು ಕಟ್ಟುನಿಟ್ಟಿನ ಸೂಚನೆ ನೀಡಿ ಕಳುಹಿಸಿದ್ದಾರೆ.
ಸಂದರ್ಶನ ನಡೆಸಿದ ಮಹಿಳಾ ನಿರೂಪಕಿ:
ತಾಲಿಬಾನ್ ಆಡಳಿತದಲ್ಲಿ ಊಹಿಸಲೂ ಸಾಧ್ಯವಿಲ್ಲದಂತೆ ಮಹಿಳಾ ನಿರೂಪಕಿಯೊಬ್ಬರು ತಾಲಿಬಾನ್ಮುಖಂಡನನ್ನು ಟಿವಿ ಸ್ಟುಡಿಯೋದಲ್ಲಿ ಸಂದರ್ಶನ ಮಾಡಿದ್ದಾರೆ. ಆದರೆ 20 ವರ್ಷಗಳ ಹಿಂದೆ ಇಂತಹ ಘಟನೆಗಳು ನಡೆಯಲು ಸಾಧ್ಯವಿರಲಿಲ್ಲ. ಏಕೆಂದರೆ ಆ ಸಂದರ್ಭದಲ್ಲಿ ಮಹಿಳೆಯರನ್ನು ಕಂಡರೆ ತಾಲಿಬಾನ್ ಎಂಬ ಕ್ರೂರಿಗಳು ಚಿತ್ರಹಿಂಸೆ ನೀಡಿ, ಕಲ್ಲಿನಿಂದ ಹೊಡೆದು ಅಥವಾ ಲೈಂಗಿಕ ಕಿರುಕುಳ ನೀಡಿ ಸಾಯಿಸುತ್ತಿದ್ದರಂತೆ. ಇದರ ದಾರುಣ ಚಿತ್ರಗಳು ಇಂದಿಗೂ ಇಲ್ಲಿನ ಜನರು ಮುಖ್ಯವಾಗಿ ಮಹಿಳೆಯರಿಗೆ ಭೀತಿಯನ್ನು ತಂದೊಡ್ಡುತ್ತಿದೆ.