ನವದೆಹಲಿ:ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಇರಲು ಅರ್ಹವಲ್ಲದ ರಾಷ್ಟ್ರ ಎಂದು ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ ಸರ್ಕಾರೇತರ ಸಂಸ್ಥೆ 'ಯುಎನ್ ವಾಚ್' ಅಭಿಪ್ರಾಯಪಟ್ಟಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ಖಾನ್ ಅವರ ಅಸಹಿಷ್ಣುತೆಯ ವಿಚಾರಗಳ ಖಂಡಿಸಿರುವ ಯುಎನ್ ವಾಚ್ ಪಾಕಿಸ್ತಾನ ಮತ್ತೆ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಜೊತೆಗೆ ಪಾಕಿಸ್ತಾನ ಮಾನವ ಹಕ್ಕುಗಳ ಮಂಡಳಿಯಲ್ಲಿರುವುದು ಜಗತ್ತಿನ ಅತ್ಯಂತ ಕೆಟ್ಟ ವಿಚಾರ ಎಂದಿದೆ.
ಯುಎನ್ ವಾಚ್ ಹೀಗೆ ಹೇಳೋಕೆ ಕಾರಣವೇನು..?
ಫ್ರೆಂಚ್ ಶಿಕ್ಷಕರನ್ನು ಪ್ಯಾರಿಸ್ನಲ್ಲಿ ವ್ಯಕ್ತಿಯೋರ್ವ ಕೊಂದಾಗ ಇಸ್ಲಾಂ ಮೂಲಭೂತವಾದದ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ವೇಳೆ ಅಲ್ಲಿನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಇಸ್ಲಾಂ ಮೂಲಭೂತವಾದ ಹಾಗೂ ಭಯೋತ್ಪಾದಕತೆಯ ವಿರುದ್ಧ ಹರಿಹಾಯ್ದು, ಫ್ರಾನ್ಸ್ನಲ್ಲಿ ಇದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಶಿಕ್ಷಕನ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಶಿಕ್ಷಕನನ ಹತ್ಯೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಜೊತೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಡುಪಿನಲ್ಲಿ ಧರ್ಮನಿಂದನೆ ಅಸಹನೀಯವಾಗಿದೆ ಎಂದು ಫ್ರಾನ್ಸ್ ವಿರುದ್ಧ ಕಿಡಿಕಾರಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯುಎನ್ ವಾಚ್ ಪಾಕಿಸ್ತಾನವನ್ನು ಮಾನವಹಕ್ಕುಗಳ ಮಂಡಳಿಯಲ್ಲಿ ಇರಲು ಅರ್ಹವಲ್ಲದ ರಾಷ್ಟ್ರ ಎಂದು ಅಭಿಪ್ರಾಯಪಟ್ಟಿದೆ.