ಉಕ್ರೇನ್: ರಷ್ಯಾ ಒಂದು ಹೆಜ್ಜೆ ಮುಂದೆ ಹೋಗಿ ಉಕ್ರೇನ್ನ ಮಧ್ಯ, ಉತ್ತರ ಹಾಗೂ ದಕ್ಷಿಣ ಭಾಗಗಗಳ ವಸತಿ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಭೀಕರ ಶೆಲ್ ದಾಳಿ ನಡೆಸಿದ್ದು, ಖಾರ್ಕಿವ್ನ ವಸತಿ ಪ್ರದೇಶದಲ್ಲಿ ಟೆಲಿವಿಷನ್ ಟವರ್ ಹಾನಿಗೀಡಾಗಿದೆ. ಕೀವ್ನ ಹೊರವಲಯದ ಇರ್ಪಿನ್ ನಗರದಲ್ಲಿ ನಡೆದ ದಾಳಿಯಲ್ಲಿ 8 ನಾಗರಿಕರು ಸಾವನ್ನಪ್ಪಿದ್ದು, ಅವರಲ್ಲಿ ಒಂದು ಕುಟುಂಬವೂ ಸೇರಿದೆ.
ಇದರಿಂದಾಗಿ ಆಕ್ರಮಣಕ್ಕೊಳಗಾಗಿರುವ ನಾಗರಿಕರನ್ನು ಕಾಪಾಡುವ ಎರಡನೇ ಪ್ರಯತ್ನವೂ ವಿಫಲವಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾ ಹಾಗೂ ಉಕ್ರೇನ್ ನಾಯಕರ ನಡುವಿನ ಮೂರನೇ ಸುತ್ತಿನ ಮಾತುಕತೆ ಇಂದು ನಡೆಯಲಿದ್ದು, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಕೆಟ್ಟ ಜನರನ್ನು ಈ ದೇಶದಿಂದ ಹೊರ ಹಾಕಬೇಕಾದರೆ ಆಕ್ರಮಿತ ಪ್ರದೇಶಗಳಲ್ಲಿರುವ ಜನರು ಬೀದಿಗಿಳಿದು ಹೋರಾಡುವುದು ಅನಿವಾರ್ಯ ಎಂದು ಧೈರ್ಯ ತುಂಬಿದ್ದಾರೆ.
ಪಶ್ಚಿಮ ರಾಷ್ಟ್ರಗಳ ನಡೆ ಟೀಕಿಸಿದ ಉಕ್ರೇನ್ ಅಧ್ಯಕ್ಷರು:ಅಮೆರಿಕ ಹಾಗೂ ನ್ಯಾಟೋ ದೇಶಗಳಿಂದ ಹೆಚ್ಚಿನ ಯುದ್ಧವಿಮಾನಗಳನ್ನು ಪೂರೈಸುವಂತೆ ಝೆಲೆನ್ಸ್ಕಿ ಮನಿವಿ ಮಾಡಿಕೊಂಡಿದ್ದರು. ಆದರೆ ಯುದ್ಧವಿಮಾನಗಳನ್ನು ಪೂರೈಸುವಲ್ಲಿ ಕೆಲವು ಸಂಕೀರ್ಣತೆ ಇರುವುದರಿಂದ ಪಶ್ಚಿಮದ ದೇಶಗಳು ರಷ್ಯಾದ ಮೇಲಿನ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಪಶ್ಚಿಮ ದೇಶಗಳ ಯಾವ ಒಬ್ಬ ನಾಯಕನೂ ರಷ್ಯಾದ ಇತ್ತೀಚಿನ ಆಕ್ರಮಣವನ್ನು ಪ್ರಶ್ನೆ ಮಾಡಿಲ್ಲ ಎಂದು ಅಧ್ಯಕ್ಷ ಝೆಲೆನ್ಸ್ಕಿ ಭಾನುವಾರ ಟೀಕಿಸಿದ್ದಾರೆ.
ನಿರಂತರ ಶೆಲ್ ಹಾಗೂ ಮಿಸೈಲ್ ದಾಳಿಯಿಂದ ಮನೆಗಳು ಧರೆಗುರುಳಿದ್ದು, ಜನರು ನೆಲದಲ್ಲೇ ಕುಳಿತುಕೊಳ್ಳುವಂತಾಗಿದೆ. ಯಾವುದೇ ಸಂವಹನಕ್ಕೂ ಅವಕಾಶವಿಲ್ಲದಂತಾಗಿದೆ. ನೀರು, ಗ್ಯಾಸ್, ಬೆಳಕು ಇಲ್ಲದೇ ಕಾಲ ದೂಡುವ ಪರಿಸ್ಥಿಯನ್ನು ರಷ್ಯಾ ಉಕ್ರೇನ್ನಲ್ಲಿ ನಿರ್ಮಿಸಿದೆ. ಮರಿಯೊಪೋಲ್ ದಕ್ಷಿಣ ಬಂದರು ನಗರದಲ್ಲಿ ಬಹುತೇಕ ನೀರು, ಆಹಾರ, ಔಷಧಗಳ ಪೂರೈಕೆ ಸ್ಥಗಿತವಾಗಿದೆ.
ರಷ್ಯಾ 11 ಗಂಟೆಗಳ ಕದನ ವಿರಾಮ ಘೋಷಿಸಿ, ಗಾಯಾಳುಗಳನ್ನು ಹಾಗೂ ಅಲ್ಲಿನ ನಾಗರಿಕರನ್ನು ಸ್ಥಳಾಂತರಿಸಲು ಅವಕಾಶವನ್ನು ನೀಡಿತ್ತು. ಆದರೆ, ಸ್ವಲ್ಪ ಸಮಯದಲ್ಲೇ ಮಾನವಿಕ ಕಾರಿಡಾರ್ಗಳನ್ನು ಮುಚ್ಚಿವೆ. ಅಲ್ಲಿ ಗ್ರೀನ್ ಕಾರಿಡಾರ್ಗಳು ಇರಲೂ ಸಾಧ್ಯವಿಲ್ಲ. ಯಾಕೆಂದರೆ ಕೇವಲ ರಷ್ಯಾದ ಕೆಟ್ಟ ತಲೆಗಳು ಮಾತ್ರ ಯಾವಾಗ ಯಾರ ಮೇಲೆ ಆಕ್ರಮಣ ಮಾಡಬೇಕು ಎಂಬುದನ್ನು ನಿರ್ಧರಿಸುತ್ತವೆ ಎಂದು ಆಂತರಿಕ ಸಚಿವಾಯಲದ ಸಲಹೆಗಾರ ಆ್ಯಂಟನ್ ಗೆರಾಶ್ಚೆಂಕೋ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ.