ವೆಲ್ಲಿಂಗ್ಟನ್, ನ್ಯೂಜಿಲ್ಯಾಂಡ್: ದಕ್ಷಿಣ ಪೆಸಿಫಿಕ್ ಸಾಗರದ ನ್ಯೂಜಿಲ್ಯಾಂಡ್ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಅಲ್ಲಿನ ವಿಜ್ಞಾನಿಗಳು ಸುನಾಮಿಯ ಎಚ್ಚರಿಕೆಯನ್ನು ನೀಡಿದ್ದಾರೆ.
ಮೊದಲು 7.3ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಇದಾದ ನಂತರ ಕೆಲವೇ ಗಂಟೆಗಳಲ್ಲಿ 8.1ರಷ್ಟು ತೀವ್ರತೆಯಿರುವ ಭೂಕಂಪ ಜರುಗಿದೆ. ಈ ಭೂಕಂಪನಗಳು ಸ್ಥಳದಲ್ಲಿ ಸುನಾಮಿ ಸಂಭವಿಸಬಹುದಾದ ಎಚ್ಚರಿಕೆ ನೀಡಿವೆ.
ರಕ್ಷಣಾ ಪ್ರಾಧಿಕಾರಗಳು ಈಗಾಗಲೇ ನ್ಯೂಜಿಲ್ಯಾಂಡ್ನ ಉತ್ತರ ದ್ವೀಪದ ಪೂರ್ವ ಕರಾವಳಿಯ ಜನರಿಗೆ ತುರ್ತಾಗಿ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದು, ಪ್ರಬಲ ಸುನಾಮಿ ಸಂಭವಿಸಬಹುದಾದ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ:ಟರ್ಕಿಯಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ: 11 ಸೈನಿಕರು ಮೃತ
ಅಮೆರಿಕದ ಸುನಾಮಿ ಎಚ್ಚರಿಕಾ ವ್ಯವಸ್ಥೆಯೂ ಕೂಡಾ ಪ್ರಬಲ ಭೂಕಂಪದ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ಭೂಕಂಪದಿಂದ ಫ್ರೆಂಚ್ ಪಾಲಿನೇಷಿಯಾದಲ್ಲಿ 1 ಮೀಟರ್ನಿಂದ 3 ಮೀಟರ್ ಎತ್ತರದ ಅಲೆಗಳು, ನಿಯು, ಕ್ಯಾಲಿಡೋನಿಯಾ, ಸೋಲೊಮನ್ ದ್ವೀಪಗಳಲ್ಲಿ 1 ಮೀಟರ್ ಎತ್ತರದ ಅಲೆಗಳು ಕಂಡುಬರುವ ಸಾಧ್ಯತೆಯಿದೆ ಎಂದಿದೆ.
ಭೂಕಂಪನದ ಕೇಂದ್ರ ಬಿಂದು ಕೆರ್ಮಾಡೆಕ್ ದ್ವೀಪಗಳಲ್ಲಿದ್ದು, 19 ಕಿಲೋಮೀಟರ್ ಆಳದಲ್ಲಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಮಾಹಿತಿ ನೀಡಿದೆ. 2011ರಲ್ಲಿ ನ್ಯೂಜಿಲೆಂಡ್ನ ಕ್ರಿಸ್ಟ್ಚರ್ಚ್ ನಗರದಲ್ಲಿ 6.3ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಸುಮಾರು 185 ಮಂದಿ ಸಾವನ್ನಪ್ಪಿದ್ದರು.