ಇಸ್ಲಾಮಾಬಾದ್/ಪೇಶಾವರ: ಪಾಕಿಸ್ತಾನದಲ್ಲಿ ಬರೋಬ್ಬರಿ 804 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಜಾಗತಿಕವಾಗಿ ಕೊರೊನಾ ಸೋಂಕಿನಿಂದ ಸಾವಿರಾರು ಜನರು ಸಾವನ್ನಪ್ಪಿದ್ದರೆ, ಕೆಲವರು ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸ್ಪಷ್ಟಪಡಿಸಿದೆ. ಅಲ್ಲದೆ, ಪೇಶಾವರದಲ್ಲಿ ಊರಿಗೆ ಊಟ ಹಾಕಿಸಿದ್ದ ಕೊರೊನಾ ಶಂಕಿತನಿಂದ ಗ್ರಾಮದ ಬಹುತೇಕರಲ್ಲಿ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಪಾಕಿಸ್ತಾನದ 804 ಕೊರೊನಾ ವೈರಸ್ ಪ್ರಕರಣಗಳು ದಾಖಲು ಪಾಕ್ನ ಸಿಂಧ್ ಪ್ರಾಂತ್ಯದಲ್ಲಿ 352, ಪಂಜಾಬ್ 225, ಬಲೂಚಿಸ್ತಾನ್ 104, ಗಿಲ್ಗಿಟ್-ಬಾಲ್ಟಿಸ್ತಾನ್ 71, ಖೈಬರ್- 31, ಇಸ್ಲಾಮಾಬಾದ್ 15 ಮತ್ತು ಒಂದು ಪ್ರಕರಣವು (ಪಿಒಕೆ) ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಖಚಿತಪಡಿಸಿದೆ.
ಕೋವಿಡ್-19ನಿಂದಾಗಿ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಪಾಕಿಸ್ತಾನ ದಿನಾಚರಣೆಯನ್ನು ರದ್ದುಗೊಳಿಸಿರುವುದಾಗಿ ಸೋಮವಾರ ಸ್ಪಷ್ಟಪಡಿಸಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಏಕತೆ, ಶಿಸ್ತು ಮತ್ತು ಉತ್ಸಾಹವನ್ನು ತೋರಿಸಬೇಕೆಂದು ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಪ್ರಧಾನಿ ಇಮ್ರಾನ್ ಖಾನ್ ಪ್ರತ್ಯೇಕ ಭಾಷಣಗಳಲ್ಲಿ ಕರೆ ನೀಡಿದ್ದಾರೆ.
"ಪಾಕಿಸ್ತಾನವು ಯಾವುದೇ ಅಗ್ನಿಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪರೀಕ್ಷೆಯಲ್ಲಿ ನಾವು ವಿಜಯಶಾಲಿಯಾಗಿ ನಿಲ್ಲುತ್ತೇವೆ" ಎಂದು ಪ್ರಧಾನಿ ಖಾನ್ ತಿಳಿಸಿದ್ದಾರೆ.
ಈ ಮಧ್ಯೆ ಕರಾಚಿ ಸೇರಿದಂತೆ ಸಿಂಧ್‌ನ ಪ್ರಮುಖ ನಗರಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಮನೆಗಳ ಹೊರಗೆ ಕಾಣಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುತ್ತಿದ್ದಾರೆ ಎಂದು ವರದಿಗಳು ಪ್ರಕಟವಾಗುತ್ತಿವೆ. ಪಾಕಿಸ್ತಾನ ಈಗಾಗಲೇ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಎಲ್ಲ ರೈಲು ಸೇವೆಗಳನ್ನು ಸಹ ಮೊಟಕುಗೊಳಿಸಿದೆ.
ಊರಿಗೆಲ್ಲಾ ಸೋಂಕು ಹರಡಿದ..
ಪವಿತ್ರ ಮೆಕ್ಕಾ ಪ್ರಯಾಣ ಮಾಡುವುದು ಪ್ರತಿಯೊಬ್ಬ ಮುಸ್ಲಿಂರ ಕನಸು. ಅದರಂತೆ ಪೇಶಾವರ್ ನಿವಾಸಿ ಸಾದತ್ ಖಾನ್ ಅಂತಹದ್ದೇ ಒಂದು ಕನಸನ್ನು ನನಸಾಗಿಸಿಕೊಂಡು ಪಾಕಿಸ್ತಾನಕ್ಕೆ ಮರಳಿದ್ದ. ಕ್ಷೇಮವಾಗಿ ಹಿಂದಿರುಗಿದ್ದ ಖುಷಿಯಲ್ಲಿ ಗ್ರಾಮದ ಸುಮಾರು 2 ಸಾವಿರ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದ.
ಆ ಹೊತ್ತಿಗಾಗಲೇ ಸಾದತ್ಗೆ ಕೊರೊನಾ ಸೋಂಕಿನ ಲಕ್ಷಣಗಳಿದ್ದವಂತೆ. ಮೊದಲಿಗೆ ಮಾಮೂಲಿ ಜ್ವರ, ಕೆಮ್ಮು ಅಂತಾ ಸುಮ್ಮನಿದ್ದ. ನಂತರ ಮಾರ್ಚ್ 16 ರಂದು ಮರ್ದಾನ್ನ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಬಳಿಕ, ಐಸೋಲೇಷನ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮಾರ್ಚ್ 18 ರಂದು ಕೊನೆಯುಸಿರೆಳೆದಿದ್ದಾನೆ. ಈಗ ಆ ವ್ಯಕ್ತಿ ಸಾದತ್ ಖಾನ್ ಮಾಡಿದ ಒಂದು ಸಣ್ಣ ಯಡವಟ್ಟು ಇಡೀ ಒಂದು ಗ್ರಾಮವನ್ನೇ ಕೊರೊನಾ ಭೀತಿಗೆ ದೂಡಿದೆ.
ಇಂತಹ ದುರ್ಘಟನೆಗಳು ಭಾರತದಲ್ಲಿ ಸಂಭವಿಸುವ ಮುನ್ನ ಭಾರತೀಯರು ಎಚ್ಚೆತ್ತುಕೊಳ್ಳಬೇಕಿದೆ. ನಿನ್ನೆ (ಮಾ.22) ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಕ್ಕೆ ದೇಶದ ಜನ ಸೂಕ್ತವಾಗಿ ಸ್ಪಂದಿಸಿದ್ದಾರೆ.