ಕಾಬೂಲ್(ಅಫ್ಘಾನಿಸ್ತಾನ): ಅಫ್ಘನ್ ಸೇನೆಯ ಜೊತೆಗೆ ಅಲ್ಲಿನ ಸ್ಥಳೀಯರು ಕೂಡಾ ಕೈಜೋಡಿಸಿದ ಕಾರಣದಿಂದ ಸ್ವಲ್ಪ ದಿನಗಳ ಹಿಂದೆ ಹಿನ್ನೆಡೆಗೆ ಒಳಗಾಗಿದ್ದ ತಾಲಿಬಾನ್ ಪಡೆಗಳು ಈಗ ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಅನ್ನು ಕೂಡಾ ವಶಕ್ಕೆ ಪಡೆದಿವೆ.
ಅಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳಲ್ಲಿ ಕಂದಹಾರ್ 12ನೇ ಪ್ರಾಂತೀಯ ರಾಜಧಾನಿಯಾಗಿದೆ. ಈ ಮೂಲಕ ತಾಲಿಬಾನಿಗಳು ಅಫ್ಘಾನಿಸ್ತಾನದ ಬಹುಭಾಗವನ್ನು ಈಗಾಗಲೇ ಆವರಿಸಿದ್ದಾರೆ ಎಂದೇ ಹೇಳಬೇಕು. ಈ ಬೆನ್ನಲ್ಲೇ ಅಲ್ಲಿನ ಸರ್ಕಾರವ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡುತ್ತಿದೆ.
ಗುರುವಾರ ರಾತ್ರಿ ಕಂದಹಾರ್ ವಶಕ್ಕೆ ಪಡೆಯಲಾಗಿದ್ದು, ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ತಾಲಿಬಾನಿಗಳಿಂದ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲು ವಿಮಾನದ ಮೂಲಕ ಬೇರೆಡೆಗೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ದೊರತಿದೆ.
ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರ ಮತ್ತು ಕಾಬೂಲ್ಗೆ ಅತ್ಯಂತ ಸಮೀಪದ ಪ್ರಾಂತೀಯ ರಾಜಧಾನಿಯಾದ ಹೆರಾತ್ ಅನ್ನೂ ತಾಲಿಬಾನ್ ವಶಪಡಿಸಿಕೊಂಡಿದೆ. ಅಮೆರಿಕದ ಮಿಲಿಟರಿ ಪಡೆಗಳು ಹೊರಡುವ ಮೊದಲೇ ತಾಲಿಬಾನಿಗಳ ಅತಿಕ್ರಮಣ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಒಟ್ಟು 34 ಪ್ರಾಂತೀಯ ರಾಜಧಾನಿಗಳಲ್ಲಿ 11 ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದು, ಹೆರಾತ್ನಲ್ಲಿರುವ ಐತಿಹಾಸಿಕ ಮಸೀದಿ 'ಗ್ರೇಟ್ ಮಸೀದಿ' (Great Mosque)ಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈ ಮಸೀದಿಯು ಕ್ರಿ.ಪೂ 500ನೇ ವರ್ಷಕ್ಕಿಂತ ಹಿಂದಿನದ್ದಾಗಿದ್ದು, ಅಲೆಕ್ಸಾಂಡರ್ನಿಂದ ಹಾನಿಗೊಳಗಾಗಿತ್ತು.ಅಲ್ಲಿನ ಸರ್ಕಾರಿ ಕಟ್ಟಡಗಳೂ ತಾಲಿಬಾನಿಗಳಿಗೆ ವಶವಾಗಿವೆ.
ಘಜ್ನಿಯ ಮೇಲೆ ತಾಲಿಬಾನಿ ಉಗ್ರರು ಹಿಡಿತ ಸಾಧಿಸಿದ್ದಾರೆ. ಇದರಿಂದಾಗಿ ಕಾಬೂಲ್ ಮತ್ತು ಇತರ ದಕ್ಷಿಣ ಪ್ರಾಂತ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡಾ ಅವರ ವಶವಾಗಿದೆ. ಈಗ ಅಫ್ಘನ್ ರಾಜಧಾನಿ ತಾಲಿಬಾನ್ ಮೇಲೆ ಸಾಕಷ್ಟು ಒತ್ತಡ ಬಿದ್ದಿದ್ದು, ಸರ್ಕಾರಿ ಪಡೆಗಳು ತಾಲಿಬಾನಿಗಳನ್ನು ಎದುರಿಸಲು ಸದಾ ಸಿದ್ಧವಾಗಿವೆ.
ತಾಲಿಬಾನಿಗಳು ಈಗ ದೇಶದ ಮೂರನೇ ಎರಡರಷ್ಟು ಭಾಗವನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ ಮತ್ತು ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರಿ ಪಡೆಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಾಲಿಬಾನ್ನಿಂದ ಅಫ್ಘನ್ ಸರ್ಕಾರ ಮರುವಶಕ್ಕೆ ಪಡೆದುಕೊಂಡ ನಗರಗಳೂ ಮತ್ತೆ ತಾಲಿಬಾನಿಗಳ ವಶವಾಗಿವೆ. ಈ ಬೆಳವಣಿಗೆ ಅಲ್ಲಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಅಮೆರಿಕ ಪೂರ್ಣವಾಗಿ ಜಾಗ ಖಾಲಿ ಮಾಡಲು ಕಾಯುತ್ತಿದೆ ತಾಲಿಬಾನ್