ಅಫ್ಘಾನ್ ದೇಶವನ್ನು ತಾಲಿಬಾನ್ ವಶಕ್ಕೆ ಪಡೆದ ಒಂದು ವಾರದ ಬಳಿಕ ಇದೀಗ ಸಿಂಹಗಳ ನಾಡು ಖ್ಯಾತಿಯ ಪಂಜಶೀರ್ ಪ್ರಾಂತ್ಯದ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದೆ. ಉಗ್ರರು ತಮ್ಮ ಪ್ರದೇಶದತ್ತ ಬರಲು ಸಿದ್ಧತೆ ನಡೆಸಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಚ್ಚೆತ್ತಿರುವ ಇಲ್ಲಿನ ನಾಯಕರು ತಕ್ಕ ಪ್ರತ್ಯುತ್ತರ ನೀಡಲು ಅಣಿಯಾಗಿದ್ದಾರೆ. ಅಹ್ಮದ್ ಮಸೂದ್ ಹಾಗೂ ಅಮ್ರುಲ್ಲಾ ಸಲೇಹ್ ನೇತೃತ್ವದ ಪಂಜ್‌ಶೀರ್ ಶರಣಾಗತಿಗೆ ತಾಲಿಬಾನ್ ಶನಿವಾರ ನಾಲ್ಕು ಗಂಟೆಗಳ ಡೆಡ್ ಲೈನ್ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ಪಂಜ್‌ಶೀರ್ ಕಣಿವೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಸಲಾಂಗ್ ಹೆದ್ದಾರಿಯನ್ನು ಬಂದ್ ಮಾಡಿರುವ ಅಘ್ಘಾನ್ ಉತ್ತರದ ಮೈತ್ರಿಕೂಟ ಪಡೆಗಳು, ತಾಲಿಬಾನಿಗಳು ತಮ್ಮ ಪ್ರದೇಶಕ್ಕೆ ಬಾರದಂತೆ ತಡೆಯೊಡ್ಡಿದ್ದಾರೆ. ಈ ಮಾರ್ಗದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ವಾಹನಗಳಲ್ಲಿಟ್ಟು ರಸ್ತೆಗಳನ್ನು ಸ್ಫೋಟಿಸಿದ್ದಾರೆ ಎಂದು ನಂಬಲರ್ಹ ಟ್ವಿಟ್ಟರ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಪಂಜಶೀರ್‌ಗೆ ಹೋಗುವ ಮಾರ್ಗದಲ್ಲಿ ಸಿಗುವ ಹಳ್ಳಿ ಜಬಲ್ ಅಲ್-ಸಿರಾಜ್‌ನ ಜನರು ತಾಲಿಬಾನ್ ದಂಗೆಕೋರರನ್ನು ತಡೆಯಲು ಹೊಂಚು ಹಾಕಿ ಕುಳಿತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:'ತಾಲಿಬಾನ್ ಆಕ್ರಮಣದ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರ ನಿರ್ವಹಿಸಿವೆ'
ತಾಲಿಬಾನ್ ಭಯದಿಂದ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡಿ ಹೋದ ನಂತರ ಅಫ್ಘಾನಿಸ್ತಾನದ 'ಅಧ್ಯಕ್ಷ'ನೆಂದು ಘೋಷಿಸಿಕೊಂಡಿರುವ ಅಮ್ರುಲ್ಲಾ ಸಲೇಹ್, ತಾಲಿಬಾನ್ ಪಂಜಶೀರ್‌ಗೆ ಬಂದರೆ ಉತ್ತರ ಒಕ್ಕೂಟವು ಕಠಿಣ ಪ್ರತಿರೋಧ ಒಡ್ಡುತ್ತದೆ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಅಫ್ಘಾನಿಸ್ತಾನದ ವಿವಿಧ ಮೂಲೆಗಳಿಂದ ಕನಿಷ್ಠ 1,000 ಜನರು ಅಭಯಾರಣ್ಯದತ್ತ ಹೋಗಿದ್ದು, ಕಣಿವೆಗಳಲ್ಲಿ ಅವಿತಿದ್ದಾರೆ. ಈಗ ತಾಲಿಬಾನ್ ವಿರುದ್ಧ ದಾಳಿಗಾಗಿ ಇವರು ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.