ಇಸ್ಲಾಮಾಬಾದ್, ಪಾಕಿಸ್ತಾನ:ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಯಲ್ಲಿ ವಿಳಂಬವಾದ ನಿಟ್ಟಿನಲ್ಲಿ ಪಾಕಿಸ್ತಾನ ಗೂಢಚಾರ ಸಂಸ್ಥೆ ಐಎಸ್‌ಐ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಮುಖ್ಯಸ್ಥ ಲೆಫ್ಟಿನೆಂಟ್ ಫೈಜ್ ಹಮೀದ್ ತಾಲಿಬಾನಿ ನಾಯಕರನ್ನು ಭೇಟಿಯಾಗಿರುವುದಾಗಿ ತಾಲಿಬಾನ್ ದೃಢಪಡಿಸಿದೆ.
ಐಎಸ್ಐನ ಫೈಜ್ ಹಮೀದ್ ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅನ್ನು ಭೇಟಿಯಾಗಿ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾಬೂಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿ ನಡೆಸಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ 'ಐಎಸ್‌ಐ ಮುಖ್ಯಸ್ಥ ಕಾಬೂಲ್‌ಗೆ ಭೇಟಿ ನೀಡಿ ಮುಲ್ಲಾ ಬರದಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ, ಆಫ್ಘನ್ ಪ್ರದೇಶವನ್ನು ಪಾಕಿಸ್ತಾನದ ವಿರುದ್ಧ ಬಳಸುವುದಿಲ್ಲ ಎಂದು ತಾಲಿಬಾನ್ ಪಾಕಿಸ್ತಾನಕ್ಕೆ ಭರವಸೆ ನೀಡಿದೆ' ಎಂದಿದ್ದಾರೆ.
ಈ ಹಿಂದೆ, ಪಾಕಿಸ್ತಾನದ ಮಾಧ್ಯಮವೊಂದು ಫೈಜ್ ಹಮೀದ್ ನೇತೃತ್ವದ ಹಿರಿಯ ಅಧಿಕಾರಿಗಳ ನಿಯೋಗವು ತಾಲಿಬಾನ್ನ ಆಹ್ವಾನದ ಮೇರೆಗೆ ಕಾಬೂಲ್‌ಗೆ ತೆರಳಿದೆ ಎಂದು ವರದಿ ಮಾಡಿತ್ತು. ಇದು ಭಾರತ ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಲು ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥರು ಇಲ್ಲಿಗೆ ಬಂದಿದ್ದಾರೆ ಎಂದು ತಾಲಿಬಾನ್ ಭಾನುವಾರ ಹೇಳಿತ್ತು. ಜೊತೆಗೆ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮಖ್ಯಸ್ಥನಾದ ಅಹ್ಮದುಲ್ಲಾ ವಸಿಕ್, ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನ ಜನತೆ, ಅವರ ಸ್ಥಳಾಂತರ ಕುರಿತಂತೆ ಎರಡೂ ದೇಶಗಳ ನಡುವೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಆದರೆ, ಅಫ್ಘಾನಿಸ್ತಾನ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿಯ ನಾಯಕ ನಿಸಾರ್ ಅಹ್ಮದ್ ಶೆರ್ಜೈ ಪಂಜ್ಶೀರ್ ಕಣಿವೆಯ ಒಕ್ಕೂಟದೊಂದಿಗೆ ಐಎಸ್‌ಐ ನಿರಂತರ ಸಂಪರ್ಕದಲ್ಲಿದೆ. ಎರಡೂ ಗುಂಪುಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ಹಾಗೂ ತಾಲಿಬಾನ್ ಸರ್ಕಾರ ರಚನೆಗೆ ಕುರಿತಂತೆ ಚರ್ಚಿಸಲು ಫೈಜ್ ಕಾಬೂಲ್‌ಗೆ ಬಂದಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ:ಗಂಡು-ಹೆಣ್ಣು ಮಕ್ಕಳ ನಡುವೆ 'ಕರ್ಟನ್'..: ತಾಲಿಬಾನ್ ಕಠಿಣ ನಿಯಮಾನುಸಾರ ಶಾಲಾ-ಕಾಲೇಜುಗಳು ಆರಂಭ