ಕಂದಹಾರ್ (ಅಫ್ಘಾನಿಸ್ತಾನ): ಮೂರು ದಿನಗಳೊಳಗೆ ಕಂದಹಾರ್ನ ಮಿಲಿಟರಿ ಕಾಂಪೌಂಡ್ನಲ್ಲಿ ವಾಸಿಸುತ್ತಿರುವ ಜನರು ಮನೆ ಖಾಲಿ ಮಾಡುವಂತೆ ತಾಲಿಬಾನ್ ಆದೇಶ ಹೊರಡಿಸಿದೆ. ಈ ಆದೇಶದ ವಿರುದ್ಧ ಜನರು ತಿರುಗಿ ಬಿದ್ದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಮನೆ ಕಟ್ಟಿ ವಾಸಿಸಲು ನಾವು ಈ ಹಿಂದಿನ ಆಫ್ಘನ್ ಸೇನೆಗೆ ಹಣ ನೀಡಿದ್ದೇವೆ. ಆದರೆ, ಈಗ ತಾಲಿಬಾನರು ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ಇದ್ದಕ್ಕಿದ್ದಂತೆ ಹೀಗೆ ಹೇಳಿದರೆ ನಾವೆಲ್ಲಿಗೆ ಹೋಗೋದು?
ಪ್ರತಿಭಟನೆ ವೇಳೆ ರಾಬಿಯಾ ಎಂಬುವರು ಮಾತನಾಡಿ, ನನಗೆ ಪತಿಯಿಲ್ಲ. ಸದ್ಯ ಐವರು ಮಕ್ಕಳೊಂದಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದೇನೆ. ನಾನು ನಿರ್ಮಿಸಿದ ಮನೆಯನ್ನು ಬಿಟ್ಟು ಹೋಗಬೇಕೆಂದು ತಾಲಿಬಾನ್ ಆದೇಶಿಸಿದೆ. ನಾನು ಈ ಮನೆ ಬಿಟ್ಟು, ಮಕ್ಕಳೊಂದಿಗೆ ಎಲ್ಲಿಗೆ ಹೋಗಲಿ ಎಂದು ಪ್ರಶ್ನಿಸಿದ್ದಾಳೆ.
ಕಂದಹಾರ್ನಲ್ಲಿರುವ ಎರಡೂವರೆ ಸಾವಿರ ಕುಟುಂಬಗಳು ಮನೆಗಳನ್ನು ತೊರೆಯುವಂತೆ ತಾಲಿಬಾನ್ ಆದೇಶಿಸಿದೆ. ಇವರೆಲ್ಲ ಮನೆ ಖಾಲಿ ಮಾಡಿದರೆ, ಉಗ್ರರು ತಮ್ಮ ಕುಟುಂಬಸ್ಥರನ್ನು ಆ ಮನೆಯಲ್ಲಿ ತಂದಿಟ್ಟುಕೊಳ್ಳಲು ಅನುಕೂಲವಾಗಲಿದೆ.
ಬೇರೆ ಕಡೆ ಹೋಗಲು ನಮ್ಮ ಬಳಿ ಹಣವೇ ಇಲ್ಲ
ಫಸಿಲ್ ಮೊಹಮ್ಮದ್ ಎಂಬವರು ಮಾತನಾಡಿ, ನನಗೆ ಬೇರೆ ಕಡೆ ಹೋಗಲು ಹಣವಿಲ್ಲ. ಒಂದು ಟೆಂಟ್ ಕೂಡ ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದಿನ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ್ದು, ತಾಲಿಬಾನ್ ಅಧಿಕಾರ ವಹಿಸಿಕೊಂಡಾಗ ಸಂತೋಷವಾಗಿತ್ತು. ಆದರೆ, ಅವರು ನಮ್ಮ ಮೇಲೆ ನಡೆಸುತ್ತಿರುವ ದೌರ್ಜನ್ಯ ನೋಡಿದರೆ ಭಯವಾಗುತ್ತದೆ ಎಂದಿದ್ದಾರೆ.
2001 ರಲ್ಲಿ ತಾಲಿಬಾನ್ ಹೊರ ಹಾಕಲು ಅಮೆರಿಕ ಸೇನೆಯು ಕಾಬೂಲ್ಗೆ ಎಂಟ್ರಿ ಕೊಟ್ಟಿತು. ಈ ವೇಳೆ, ಸ್ಥಳಾಂತರಗೊಂಡಿದ್ದ ಆಫ್ಘನ್ನರು, ಕಂದಹಾರ್ನಲ್ಲಿ ತುಂಡು ಭೂಮಿ ಖರೀದಿಸಿ ಮನೆಗಳನ್ನು ನಿರ್ಮಿಸಿದ್ದರು.
ರ‍್ಯಾಲಿ ನಡೆಸಿದರೆ ಕ್ರಮ ಎಂದ ತಾಲಿಬಾನ್
ಕಂದಹಾರ್ನಲ್ಲಿರುವ ಮನೆಗಳ ದಾಖಲೆಗಳ ಬಗ್ಗೆ ಪರಿಶೀಲಿಸುವವರೆಗೆ ಜನರು ಅಲ್ಲಿ ವಾಸಿಸಬಹುದು ಎಂದು ಕಂದಹಾರ್ನ ತಾಲಿಬಾನ್ ಮಾಧ್ಯಮ ಮುಖ್ಯಸ್ಥ ರಹಮತುಲ್ಲಾ ನರೈವಾಲ್ ಹೇಳಿದ್ದಾರೆ. ಆದರೆ, ಕಂದಹಾರ್ನ ಜನತೆ ರ‍್ಯಾಲಿ ನಡೆಸುವಂತಿಲ್ಲ. ಒಂದು ವೇಳೆ ಅವರು ಪ್ರತಿಭಟನೆ ನಡೆಸಿದ್ರೆ ಅದು ಕಾನೂನು ಬಾಹಿರವಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲಿಬಾನ್, ಕಂದಹಾರ್ನ ಜನರಿಗೆ ಮನೆಗಳು ಎಷ್ಟು ಬೆಲೆ ಬಾಳುತ್ತವೋ ಅಷ್ಟು ಹಣ ನೀಡಲು ಸಿದ್ಧವಾಗಿದೆ. ಆದರೆ, ಪರ್ಯಾಯ ಸ್ಥಳ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.