ಕಾಬುಲ್:ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಆಚರಣೆಯನ್ನು ಕೋವಿಡ್-19ನಿಂದಾಗಿ ಅತ್ಯಂತ ಸರಳವಾಗಿ ಆಚರಿಸುತ್ತಿದ್ದಾರೆ. ಕೆಲವರು ಇಂದೇ ಈದ್ ಉಲ್ ಫಿತರ್ ಮಾಡಿದ್ರೆ, ಮತ್ತೆ ಕೆಲವೆಡೆ ನಾಳೆ ಹಬ್ಬವನ್ನು ಆಚರಿಸುತ್ತಿದ್ದಾರೆ.
ಉಗ್ರ ಸಂಘಟನೆ ತಾಲಿಬಾನ್ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ಕದನ ವಿರಾಮ ಉಲ್ಲಂಘಿಸದಿರಲು ನಿರ್ಧರಿಸಿದ್ದಾರೆ.
ತಮ್ಮ ನಿರ್ಧಾರದ ಬಗ್ಗೆ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ಮುಸ್ಲಿಂ ಬಾಂಧವರ ಅತಿ ದೊಡ್ಡ ಹಬ್ಬವಾದ ರಂಜಾನ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉಗ್ರ ಸಂಘಟನೆ ತಾಲಿಬಾನ್‌ನೊಂದಿಗೆ ಮಾತುಕತೆಯಿಂದ ಕದನ ವಿರಾಮಕ್ಕೆ ಬ್ರೇಕ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘನೆ ನಿಲ್ಲಿಸುವಂತೆ ಅಫ್ಘಾನಿಸ್ತಾನಕ್ಕೆ ಅಮೆರಿಕಾದ ವಿಶೇಷ ರಾಯಭಾರಿ ಆಗಿರುವ ಝಲ್ನೇ ಖಾಲೀಲ್‌ಜಾದ್ ಅವರು ಮನವಿ ಮಾಡಿದ್ದ ಮರುದಿನವೇ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಾಬುಲ್ ಮತ್ತು ದೊಹಾ ಪ್ರವಾಸದಲ್ಲಿರುವ ಖಾಲೀಲ್‌ಜಾದ್, ಉಗ್ರ ಸಂಘಟನೆ ತಾಲಿಬಾನ್ ಹಿಂಸಾಚಾರವನ್ನು ನಿಲ್ಲಿಸಿ ಇಂಟ್ರಾ-ಅಪ್ಘಾನ್ ಮಾತುಕತೆಯಂತೆ ನಡೆಯಬೇಕು ಎಂದು ಹೇಳಿದ್ದರು. ಅಪ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ಕಳೆದ ಫೆಬ್ರವರಿಯಲ್ಲಿ ಅಮೆರಿಕಾ, ತಾಲಿಬಾನ್ ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಬಳಿಕ ವಿಶ್ವದ ದೊಡ್ಡಣ್ಣ ತನ್ನ ಸೇನೆಯನ್ನು ಅಫ್ಘಾನ್‌ನಿಂದ ಹಿಂದಕ್ಕೆ ಪಡೆದಿತ್ತು.
ಈದ್ ಉಲ್ ಫಿತರ್ ಶಾಂತಿ ಕಾಪಾಡುವ ಸಂದೇಶವನ್ನು ತಾಲಿಬಾನ್ ನಾಯಕರೂ ನೀಡಿದ್ದಾನೆ. ಹೀಗಾಗಿ ಉಗ್ರರು 3 ದಿನ ಕದನ ವಿರಾಮ ಉಲ್ಲಂಘನೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.