ಕಾಬೂಲ್:ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ಪಂಜ್ಶೀರ್ ಮೇಲೆ ಕೊನೆಗೂ ತಾಲಿಬಾನ್ ಉಗ್ರರು ಹಿಡಿತ ಸಾಧಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ತಾಲಿಬಾನ್ ಕಮಾಂಡರ್ವೋರ್ವರು ಹೇಳಿಕೊಂಡಿದ್ದು, ಈ ಮೂಲಕ ಸಂಪೂರ್ಣ ಅಫ್ಘಾನಿಸ್ತಾನದ ಮೇಲೆ ಇದೀಗ ನಾವು ನಿಯಂತ್ರಣ ಸಾಧಿಸಿದ್ದೇವೆ ಎಂದಿದ್ದಾರೆ.
ಈ ಸುದ್ದಿ ಎಷ್ಟರ ಮಟ್ಟಿಗೆ ನಂಬಲಾರ್ಹ ಎಂಬುದು ಗೊತ್ತಿಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಕಮಾಂಡೋ ಮಾಹಿತಿ ಹಂಚಿಕೊಂಡಿರುವ ಕಾರಣ ನಿಜ ಇರಬಹುದು ಎನ್ನಲಾಗುತ್ತಿದೆ. ಅಲ್ಲಾಹನ ಕೃಪೆಯಿಂದ ನಾವು ಇಡೀ ಅಫ್ಘಾನಿಸ್ತಾನದ ಮೇಲೆ ಇದೀಗ ನಿಯಂತ್ರಣ ಸಾಧಿಸಿದ್ದೇವೆ. ಪಂಜ್ಶೀರ್ ಕೂಡ ಇದೀಗ ನಮ್ಮ ಹಿಡಿತದಲ್ಲಿದೆ ಎಂದಿದ್ದಾರೆ. ಈ ಮಾಹಿತಿ ಆಧರಿಸಿ ರಾಯಿಟರ್ಸ್ ಕೂಡ ಸುದ್ದಿ ಪ್ರಕಟ ಮಾಡಿದೆ.
ಪಂಜ್ಶೀರ್ ಪ್ರಾಂತ್ಯ ಹೊರತುಪಡಿಸಿ ಎಲ್ಲ ನಗರಗಳ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದ ತಾಲಿಬಾನ್ ಉಗ್ರರು, ಇಲ್ಲೂ ಕೂಡ ಪ್ರಾಬಲ್ಯ ಸಾಧಿಸುವ ನಿಟ್ಟಿನಿಂದ ಅನೇಕ ರೀತಿಯ ಸರ್ಕಸ್ ನಡೆಸಿತ್ತು. ಅಲ್ಲಿನ ಅಧಿಕಾರಿಗಳೊಂದಿಗೆ ತಾಲಿಬಾನ್ ಮಾತುಕತೆ ನಡೆಸಿತ್ತು. ಈ ವೇಳೆ ಪ್ರಾಂತ್ಯ ಹಸ್ತಾಂತರ ಮಾಡಲು ನಿರಾಕರಣೆ ಮಾಡಿದ್ದರಿಂದ ಬೇರೆ ಬೇರೆ ದಿಕ್ಕುಗಳಿಂದ ದಾಳಿ ಮಾಡಲಾಗಿತ್ತು. ಆದರೆ ತಿರುಗಿಬಿದ್ದು ಹಿಮ್ಮೆಟ್ಟಿಸುವಲ್ಲಿ ಅಲ್ಲಿನ ನಿಗ್ರಹ ಪಡೆ ಯಶಸ್ವಿಯಾಗಿತ್ತು. ಇದಾದ ಬಳಿಕ ಈ ಪ್ರದೇಶದ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದ ತಾಲಿಬಾನ್, ತದನಂತರ ಔಷಧ, ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರಿದ್ದರು. ಹೀಗಾಗಿ ತೊಂದರೆಗೊಳಗಾಗಿದ್ದ ಪಂಜ್ಶೀರ್ ಇದೀಗ ತಾಲಿಬಾನ್ಗಳ ಕೈವಶವಾಗಿದೆ ಎನ್ನಲಾಗಿದೆ.