ಕಾಬೂಲ್(ಅಫ್ಘಾನಿಸ್ತಾನ): ದೇಶದಿಂದ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣ ಹಿಂತೆಗೆದುಕೊಂಡ ಬಳಿಕ, ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ತಾಲಿಬಾನ್, ವಿಜಯೋತ್ಸವದ ಮೆರವಣಿಗೆ ಜರುಗಿತು.
ಫೋಟೋಸ್ಗೆ ಪೋಸ್ ನೀಡಿದ ಉಗ್ರರು
ಈ ವೇಳೆ ಟಾರ್ಮ್ಯಾಕ್ ಮೇಲೆ ನಿಂತ ತಾಲಿಬಾನ್ ನಾಯಕರು, ದೇಶವನ್ನು ಸುರಕ್ಷಿತವಾಗಿಡುತ್ತೇವೆ. ಏರ್ಪೋರ್ಟ್ಅನ್ನು ಶೀಘ್ರವಾಗಿ ತೆರೆಯಲು ಕ್ರಮ ಕೈಗೊಳ್ಳುತ್ತೇವೆ ಎಂದರು. ಮಾರಕಾಸ್ತ್ರಗಳಿಂದ ಇಡೀ ನಗರ ಸುತ್ತುವರಿದ ನಾಯಕರು ಸಖತ್ ಖುಷಿಯಿಂದ ಫೋಟೋಗಳಿಗೆ ಪೋಸ್ ನೀಡಿದ್ರು. ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏಕೈಕ ರನ್ವೇ ಉದ್ದಕ್ಕೂ ತಾಲಿಬಾನ್‌ನ ವಾಹನಗಳು ಹಿಂದಕ್ಕೆ ಮತ್ತು ಮುಂದಕ್ಕೆ ಸಂಚರಿಸಿದವು.
ತಾಲಿಬಾನ್ಗೆ ದೊಡ್ಡ ಸವಾಲು
ಎರಡು ದಶಕಗಳಿಂದ ಅಮೆರಿಕ ಸೇನೆ ನೆರವಿನಿಂದ ಜೀವನ ನಡೆಸುತ್ತಿದ್ದ 38 ದಶಲಕ್ಷ ಜನರು ಇದೀಗ ತಾಲಿಬಾನ್ ಕಪಿಮುಷ್ಠಿಗೆ ಸಿಲುಕಿ ನರಳಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಮತ್ತೆ ಸರ್ಕಾರ ರಚಿಸಿ, ಸುಗಮ ಆಡಳಿತ ನಡೆಸುವುದು ತಾಲಿಬಾನ್ ಮುಂದಿರುವ ಸವಾಲು.
ಮಿಲಿಟರಿ, ದೇಶ ನಮ್ಮ ನಿಯಂತ್ರಣದಲ್ಲಿದೆ..
ವಿಜಯೋತ್ಸವದ ಬಳಿಕ ಮಾತನಾಡಿದ ತಾಲಿಬಾನ್‌ನ ಉನ್ನತ ಅಧಿಕಾರಿ ಹೆಕ್ಮತ್ ಉಲ್ಲಾ ವಾಸಿಕ್, ಮಿಲಿಟರಿ ಹಾಗೂ ನಾಗರಿಕರು ನಮ್ಮ ನಿಯಂತ್ರಣದಲ್ಲಿದೆ. ಶೀಘ್ರದಲ್ಲೇ ನಾವು ಹೊಸ ಸಚಿವ ಸಂಪುಟವನ್ನು ರಚಿಸಲಿದ್ದೇವೆ ಎಂದಿದ್ದಾರೆ. ನಿಧಾನವಾಗಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಜನರಿಗೆ ತಾಳ್ಮೆಯಿರಬೇಕು, ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ತೆರಳಿ ಎಂದು ಆಫ್ಘನ್ ನಿವಾಸಿಗಳಿಗೆ ಕರೆ ನೀಡಿದರು.
‘ಜಾಗರೂಕರಾಗಿರಿ’
ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಬದ್ರಿ ತಮ್ಮ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರದೊಂದಿಗೆ ವ್ಯವಹರಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ನಮ್ಮ ರಾಷ್ಟ್ರವು ಯುದ್ಧ ಮತ್ತು ಆಕ್ರಮಣವನ್ನು ಅನುಭವಿಸಿದೆ. ನಮ್ಮ ಜನರಿಗೆ ಹೆಚ್ಚಿನ ಸಹಿಷ್ಣುತೆ ಇಲ್ಲ ಎಂದರು. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಪುನಾರಂಭಿಸುವ ಆಲೋಚನೆಯಲ್ಲಿದ್ದೇವೆ. ಇದು ದೇಶವನ್ನು ತೊರೆಯಲು ಬಯಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.