ಕಾಬೂಲ್ :ಅಮೆರಿಕ ಸೇನೆಯನ್ನು ವಾಪಸ್ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳು, ಇರಾನಿನ ಗಡಿ ಸೇರಿದಂತೆ ನಿಮ್ರೋಝ್ ಪ್ರಾಂತ್ಯದ ರಾಜಧಾನಿಯನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಗುರುವಾರ ರಾತ್ರಿ ನಿಮ್ರೋಝ್ ಪ್ರಾಂತ್ಯದ ರಾಜಧಾನಿ ಝರಂಜ್ ಮೇಲೆ ತಾಲಿಬಾನ್ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ, ನಗರದ ವಿವಿಧ ಭಾಗಗಳಲ್ಲಿ ಸರ್ಕಾರಿ ಆಸ್ತಿಗಳನ್ನು ಲೂಟಿ ಮಾಡಲಾಗಿದೆ ಎಂದು ತಿಳಿಸಿವೆ.
ನಿಮ್ರೋಝ್ ಪ್ರಾಂತ್ಯದ ಕನಕ್ ಜಿಲ್ಲೆಯನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ಗಳು ಕನಿಷ್ಠ 30 ಅಫ್ಘಾನ್ ಯೋಧರನ್ನು ನಿರ್ಧಯವಾಗಿ ಕೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಯೋಧನರನ್ನು ಕೊಂದಿರುವ ಆರೋಪವನ್ನು ತಾಲಿಬಾನ್ ನಿರಾಕರಿಸಿದೆ.
ತಾಲಿಬಾನ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಗಡಿದಾಟಿ ಇರಾನ್ಗೆ ಹೋಗಲು ಪ್ರಯತ್ನ ಮಾಡಿದ್ದಾರೆ ಎಂದು ನಿಮ್ರೋಝ್ನ ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಓದಿ : 94 ತಾಲಿಬಾನ್, ಅಲ್-ಖೈದಾ ಉಗ್ರರ ಸದೆಬಡಿದ ಅಫ್ಘನ್ ಸೇನೆ
ಝರಂಜ್ನ ಡೌನ್ ಟೌನ್ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಮೇಲೆ ತಾಲಿಬಾನಿಗಳು ಏರ್ಸ್ಟ್ರೈಕ್ ಮಾಡಿದ್ದಾರೆ. ಅಲ್ಲಿ ದೊಡ್ಡ ಎರಡು ಸ್ಫೋಟದ ಶಬ್ದ ಕೇಳಿ ಬಂದಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನ ವಿವಿಧ ಪ್ರದೇಶಗಳಲ್ಲಿ ನಿಯೋಜನೆಗೊಂಡಿದ್ದ ತಮ್ಮ ಮಿಲಿಟರಿ ಪಡೆಗಳನ್ನು ಕೆಲ ತಿಂಗಳ ಹಿಂದೆ ಯುಎಸ್ ವಾಪಸ್ ಪಡೆದಿತ್ತು. ಇದಕ್ಕೂ ಮುನ್ನ ಕತಾರ್ ರಾಜಧಾನಿ ದೋಹಾದಲ್ಲಿ ಅಫ್ಘಾನ್ ಮಿಲಿಟರಿ ಮತ್ತು ತಾಲಿಬಾನ್ ನಡುವೆ ಶಾಂತಿ ಮಾತುಕತೆ ನಡೆದಿತ್ತು. ಆದರೆ, ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ತಾಲಿಬಾನಿಗಳು ಯುಎಸ್ ಸೇನೆ ವಾಪಾಸ್ ಹೋಗುತ್ತಿದ್ದಂತೆ ತಮ್ಮ ನರಿ ಬುದ್ದಿ ತೋರಿಸಲು ಪ್ರಾರಂಭಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಲು ತಾಲಿಬಾನ್ ಉಗ್ರರು ಅಮಾಯಕ ನಾಗರಿಕರು ಮತ್ತು ಅಫ್ಘಾನ್ ಸೇನಾ ಸಿಬ್ಬಂದಿಯ ಮಾರಣಹೋಮ ಮಾಡುತ್ತಿದೆ. ಇತ್ತೀಚೆಗೆ ಕಾಬೂಲ್ನ ವಿಶ್ವಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿತ್ತು. ಈ ಮೂಲಕ ಭಯ ಹುಟ್ಟಿಸುವ ಕೆಲಸವನ್ನು ತಾಲಿಬಾನ್ ಮಾಡುತ್ತಿದೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ 1,677 ನಾಗರಿಕರನ್ನು ತಾಲಿಬಾನ್ ಕೊಂದು ಹಾಕಿದೆ ಮತ್ತು 3,644 ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಹಾನಿ ಪ್ರಮಾಣ ಶೇ.80 ರಷ್ಟು ಹೆಚ್ಚಾಗಿದೆ.