ಕಾಬೂಲ್, ಆಫ್ಘಾನಿಸ್ತಾನ :ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಆಫ್ಘಾನಿಸ್ತಾನದ ಕಾನೂನುಗಳಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಈ ಕಾನೂನುಗಳಿಂದ ಜನರಿಗೆ ಸಾಕಷ್ಟು ತೊಂದರೆಯುಂಟಾಗಿದ್ದು, ಸಂಗೀತ ಪ್ರೇಮಿಗಳಿಗೂ ಅನೇಕ ನಿರ್ಬಂಧಗಳು ಎದುರಾಗಿವೆ.
ಆಫ್ಘನ್ ಪತ್ರಿಕೋದ್ಯಮಿ ಅಬ್ದುಲ್ಹಕ್ ಒಮೆರಿ ಎಂಬುವರು ಟ್ವಿಟರ್ನಲ್ಲಿ ಮಾಡಿರುವ ವಿಡಿಯೋ ಪೋಸ್ಟ್ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಬೆಳಕಿಗೆ ತಂದಿದೆ. ತಾಲಿಬಾನಿಗಳು ಮ್ಯೂಸಿಷಿಯನ್ನ ಸಂಗೀತ ಸಾಧನಗಳನ್ನು ರಸ್ತೆಯಲ್ಲೇ ಸುಟ್ಟು ಹಾಕಿರುವುದು ಈ ವಿಡಿಯೋದಲ್ಲಿದೆ.
ಸಂಗೀತಗಾರ ಸ್ಥಳದಲ್ಲಿಯೇ ಕಣ್ಣೀರು ಹಾಕುತ್ತಿರುವುದು ಮತ್ತು ತಾಲಿಬಾನಿಯೊಬ್ಬ ನಗುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲಿ ವಾಹನಗಳಲ್ಲಿ ಸಂಗೀತ ಕೇಳುವುದನ್ನು ತಾಲಿಬಾನ್ ಬ್ಯಾನ್ ಮಾಡಿತ್ತು ಎಂಬುದು ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶ.
ಇನ್ನಷ್ಟು ವಿಚಿತ್ರ ಕಾನೂನುಗಳು: ಇದಷ್ಟೇ ಅಲ್ಲದೇ ಮದುವೆಗಳಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ. ಮದುವೆಗೆ ಬರುವ ಪುರುಷರು ಮತ್ತು ಮಹಿಳೆಯರು ಬೇರೆ ಬೇರೆ ಹಾಲ್ಗಳಲ್ಲಿರಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ಆಫ್ಘಾನಿಸ್ತಾನದ ಹೋಟೆಲ್‌ನ ಮಾಲೀಕರೊಬ್ಬರು ಅಕ್ಟೋಬರ್ನಲ್ಲಿ ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದರು.
ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿರುವಂತೆ ಆಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳನ್ನು ಪ್ರದರ್ಶಿಸುವ ಬೊಂಬೆಗಳ (mannequins) ತಲೆಗಳನ್ನು ತೆಗೆಯಬೇಕೆಂದು ಆದೇಶ ಹೊರಡಿಸಲಾಗಿತ್ತು. ಬೊಂಬೆಗಳಿಗೆ ತಲೆಗಳಿರುವುದು ಷರಿಯತ್ ಕಾನೂನು ಪ್ರಕಾರ ಅಪರಾಧ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ತಲೆಗಳಿರುವ ಬೊಂಬೆಗಳನ್ನು ಹೊಂದಿದ್ದ ಬಟ್ಟೆ ಅಂಗಡಿಗಳ ಮೇಲೆ ತಾಲಿಬಾನಿಗಳು ದಾಳಿ ಮಾಡಿರುವ ಘಟನೆಯೂ ನಡೆದಿತ್ತು. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಮಹಿಳೆಯರನ್ನು ತೋರಿಸುವುದನ್ನು ತಾಲಿಬಾನ್ ಸರ್ಕಾರ ನಿಷೇಧಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ:ಟೆಕ್ಸಾಸ್ ಒತ್ತೆಯಾಳು ಪ್ರಕರಣಕ್ಕೆ ನಡುಗಿದ ಅಮೆರಿಕ, ಇಸ್ರೇಲ್: ಇಷ್ಟಕ್ಕೂ ಪಾಕ್‌ನ ಆಫಿಯಾ ಸಿದ್ದಿಕಿ ಯಾರು? ಈಕೆಗೇಕೆ 86 ವರ್ಷ ಶಿಕ್ಷೆ?