ಕಾಬೂಲ್(ಅಫ್ಘಾನಿಸ್ತಾನ) :ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಿದ ಕೆಲವು ದಿನಗಳ ನಂತರ, ಹಿರಾಟ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಹ-ಶಿಕ್ಷಣ (co-education) ನಿಷೇಧಿಸಿದ್ದಾರೆ. ಇದನ್ನು 'ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ' ಎಂದು ಅವರು ಹೇಳ್ಕೊಂಡಿದಾರೆ.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಶನಿವಾರ ವರದಿ ಮಾಡಿದೆ.
ಕಳೆದ ವಾರ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಹೊರಡಿಸಿದ ಮೊದಲ 'ಫತ್ವಾ' ಇದಾಗಿದೆ. ಮಂಗಳವಾರ, ಜಬೀಉಲ್ಲಾ ಮುಜಾಹಿದ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾಲಿಬಾನ್ ಇಸ್ಲಾಮಿಕ್ ಕಾನೂನಿನ ನಿಯಮಗಳ ಅಡಿಯಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಭರವಸೆ ನೀಡಿದ್ದರು.