ಕಾಬೂಲ್, ಅಫ್ಘಾನಿಸ್ತಾನ:ದಿನದಿಂದ ದಿನಕ್ಕೆ ಅಫ್ಘಾನಿಸ್ತಾನದಿಂದ ಬೇರೆ ರಾಷ್ಟ್ರಗಳಿಗೆ ವಲಸೆ ಹೋಗುವವರ ಪ್ರಮಾಣ ಹೆಚ್ಚುತ್ತಿದೆ. ಈ ವಲಸೆಯನ್ನು ನಿಯಂತ್ರಿಸಲು ತಾಲಿಬಾನಿಗಳು ಮುಂದಾಗಿದ್ದು, ಅಲ್ಲಿನ ಇಸ್ಲಾಂ ಧಾರ್ಮಿಕ ನಾಯಕರ ಮೊರೆಹೋಗಿದ್ದಾರೆ.
ದೇಶದಿಂದ ಹೊರಡುವ ಆಫ್ಘನ್ನರಿಗೆ, ದೇಶ ಬಿಟ್ಟು ತೆರಳದಂತೆ ಒತ್ತಾಯಿಸಬೇಕೆಂದು ಇಸ್ಲಾಂ ಧಾರ್ಮಿಕ ನಾಯಕರಾದ ಇಮಾಮ್ಗಳಿಗೆ ತಾಲಿಬಾನ್ ನಾಯಕರು ಸೂಚನೆ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಫ್ಘಾನಿಸ್ತಾನದಾದ್ಯಂತ ಇರುವ ಇಮಾಮ್‌ಗಳು ಮತ್ತು ಇಸ್ಲಾಂ ಬೋಧಕರಿಗೆ ತಾಲಿಬಾನ್ ಕೆಲವೊಂದು ಧರ್ಮೋಪದೇಶದ ಮಾರ್ಗಸೂಚಿಗಳನ್ನು ನೀಡಿದ್ದು, ಭಯ ಅಥವಾ ಇತರ ಕಾರಣಗಳಿಗಾಗಿ ದೇಶವನ್ನು ತೊರೆಯದಂತೆ ನಾಗರಿಕರನ್ನು ಒತ್ತಾಯಿಸುವಂತೆ ಹೇಳಿದೆ ಎಂದು ಪಾಕಿಸ್ತಾನದ ದಿ ನ್ಯೂಸ್ ವರದಿ ಮಾಡಿದೆ.
ಕಾಬೂಲ್ ಏರ್ಪೋರ್ಟ್ಗೆ ಬಂದವರಿಗೆ ಥಳಿತ..
ಕಾಬೂಲ್ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇರೆ ದೇಶಗಳಿಗೆ ತೆರಳಲು ಜನರು ಮುಂದಾಗುತ್ತಿದ್ದು, ವಿಮಾನ ನಿಲ್ದಾಣವನ್ನು ತಾಲಿಬಾನಿಗಳು ಸುತ್ತುವರೆದಿದ್ದಾರೆ.
ವಿಮಾನ ನಿಲ್ದಾಣದ ಬಳಿ ಗಾಳಿಯಲ್ಲಿ ಗುಂಡು ಹಾರಿಸುವುದು ಮಾತ್ರವಲ್ಲದೇ, ಅಲ್ಲಿಗೆ ಬಳಿ ಬರುವ ವ್ಯಕ್ತಿಗಳ ಮೇಲೆ ಎಕೆ-47ನಿಂದ ಹಲ್ಲೆ ನಡೆಸುತ್ತಿದ್ದಾರೆ. ಅಗತ್ಯ ದಾಖಲೆಗಳಿದ್ದರೂ ಅವರನ್ನು ಏರ್ಪೋರ್ಟ್ ಒಳಗೆ ತೆರಳಲು ಬಿಡುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದೊಂದು ದುರಂತವಾಗಿದ್ದು, ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಜನರ ಮೇಲೆ ಎಕೆ-47ನಿಂದ ಹಲ್ಲೆ ಮಾಡುತ್ತಾರೆ ಎಂದು ಅಫ್ಘಾನಿಸ್ತಾನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೊಬ್ಬ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ ಎಂದು ರೇಡಿಯೋ ನ್ಯೂಜಿಲ್ಯಾಂಡ್ (ಆರ್ಎನ್ಝೆಡ್) ಹೇಳಿದೆ.
ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಜರ್ಮನಿಗೆ ಬಂದ ವ್ಯಕ್ತಿಯೊಬ್ಬ ಎಲ್ಲರಿಗೂ ಅಫ್ಘಾನಿಸ್ತಾನದಿಂದ ಹೊರಹೋಗಬೇಕೆಂದೇ ಬಯಸುತ್ತಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ನಾನು ಅಲ್ಲಿಂದ ತಪ್ಪಿಸಿಕೊಂಡೆನಾದರೂ, ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವ್ಯಕ್ತಿಯೋರ್ವ ಅಳಲು ತೋಡಿಕೊಂಡಿದ್ದಾನೆ ಎಂದು ಆರ್ಎನ್ಝೆಡ್ ಉಲ್ಲೇಖಿಸಿದೆ.
ಇದನ್ನೂ ಓದಿ:ವಿಮಾನದಿಂದ ಬಿದ್ದು ಸಾವನ್ನಪ್ಪಿದ ಆಫ್ಘನ್ ಫುಟ್ಬಾಲ್ ತಂಡದ ಉದಯೋನ್ಮುಖ ಆಟಗಾರ