ದೋಹಾ(ಕತಾರ್):ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು, ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಿರುವ ಭಾರತದ ಮಾನವೀಯ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ತಾಲಿಬಾನ್ ಶ್ಲಾಘಿಸಿದ್ದು, ಅಫ್ಘಾನಿಸ್ತಾನ ಸರ್ಕಾರಕ್ಕೆ ಮಿಲಿಟರಿ ಸಹಕಾರ ನೀಡಬಾರದೆಂದು ಭಾರತವನ್ನು ಒತ್ತಾಯಿಸಿದೆ.
ಕತಾರ್ ಮೂಲದ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಎಎನ್ಐನೊಂದಿಗೆ ಮಾತನಾಡಿದ್ದು, ಅವರು (ಭಾರತ) ಅಫ್ಘಾನಿಸ್ತಾನಕ್ಕೆ ಮಿಲಿಟರಿ ಸಹಕಾರ ನೀಡಿದರೆ ಅದು ಅವರಿಗೆ ಒಳ್ಳೆಯದಲ್ಲ ಎಂದೇ ಭಾವಿಸುತ್ತೇನೆ. ಅಫ್ಘಾನಿಸ್ತಾನದಲ್ಲಿ ಮಿಲಿಟರಿ ನಿಯೋಜನೆ ಮಾಡಲು ಬಂದ ದೇಶಗಳ ಸ್ಥಿತಿ ಏನಾಗಿದೆ ಎಂಬುದು ತೆರೆದ ಪುಸ್ತಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನದ ಜನರಿಗೆ ಅಣೆಕಟ್ಟುಗಳು, ರಾಷ್ಟ್ರೀಯ ಯೋಜನೆಗಳು, ಮೂಲಸೌಕರ್ಯಗಳು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ, ಅದರ ಪುನರ್ನಿರ್ಮಾಣಕ್ಕಾಗಿ, ಆರ್ಥಿಕ ಏಳಿಗೆಗಾಗಿ ಮತ್ತು ಅಫ್ಘಾನಿಸ್ತಾನದ ಜನರಿಗಾಗಿ ಭಾರತ ಸರ್ಕಾರ ಮಾಡಿದ ಎಲ್ಲವನ್ನೂ ನಾವು ಪ್ರಶಂಸಿಸುತ್ತೇವೆ ಎಂದು ಶಾಹೀನ್ ಹೇಳಿದ್ದಾರೆ.
ಆಫ್ಘನ್ ಪಡೆಗಳು ಮತ್ತು ತಾಲಿಬಾನ್ ನಡುವೆ ಹಿಂಸಾಚಾರ ಹೆಚ್ಚಾಗಬಹುದೆಂಬ ಭಯದಿಂದ, ಭಾರತ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳು ತಾಲಿಬಾನ್ ಅಡಿಯಲ್ಲಿ ಬಂದ ಪ್ರಾಂತ್ಯಗಳಲ್ಲಿರುವ ರಾಯಭಾರ ಕಚೇರಿಗಳು, ಸಿಬ್ಬಂದಿಯನ್ನು ಸ್ಥಳಾಂತರ ಮಾಡಿವೆ.