ತೈಪೆ(ತೈವಾನ್): ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಇತರ ದೇಶಗಳ ಅಂತಾರಾಷ್ಟ್ರೀಯ ಸಂಬಂಧಗಳಲ್ಲೂ ಗಮನಾರ್ಹ ಬದಲಾವಣೆಯಾಗುತ್ತಿದೆ. ಅಮೆರಿಕದ ಮನವಿಯ ಮೇರೆಗೆ ಸಾಕಷ್ಟು ರಾಷ್ಟ್ರಗಳು ರಷ್ಯಾದ ಮೇಲೆ ಹಲವು ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿವೆ. ಈ ಬೆನ್ನಲ್ಲೇ ತೈವಾನ್ ಕೂಡಾ 'ನಿರ್ಬಂಧ ಹೇರುವ' ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ, ಚೀನಾ ಮತ್ತು ತೈವಾನ್ ಸಂಬಂಧಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೀಡಾಗುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ತೈವಾನ್ ರಷ್ಯಾದ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಬೆಂಬಲಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತೈವಾನ್ ವಿದೇಶಾಂಗ ಸಚಿವಾಲಯ, ಶಾಂತಿಯುತ ರಾಜತಾಂತ್ರಿಕ ಮಾತುಕತೆಗಳ ಮೂಲಕ ವಿವಾದಗಳನ್ನು ಪರಿಹರಿಸಿಕೊಳ್ಳಬೇಕಾಗಿತ್ತು. ಇದಕ್ಕೆ ಬದಲಾಗಿ ರಷ್ಯಾ ಬೆದರಿಸಲು ಮುಂದಾಗಿದೆ. ಸರ್ಕಾರ ರಷ್ಯಾದ ನಡೆಗೆ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.