ಇಸ್ಲಾಮಾಬಾದ್(ಪಾಕಿಸ್ತಾನ):ಅಫ್ಘಾನಿಸ್ತಾನದ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿ ತಾಲಿಬಾನ್ ಅನ್ನು ಅಧಿಕಾರಕ್ಕೆ ತಂದಿರುವ ಪಾಕಿಸ್ತಾನ ಈಗ ಆ ದೇಶಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಕೊಡಿಸಲು ಇನ್ನಿಲ್ಲದ ತಂತ್ರಗಳನ್ನು ಅನುಸರಿಸುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನಕ್ಕೆ ಸಂಕಷ್ಟವೊಂದು ಎದುರಾಗಿದೆ.
ಅಲ್ಲಿನ ಸ್ಥಳೀಯ ಮಾಧ್ಯಮಗಳು ಹೇಳುವಂತೆ 'ಸಕ್ಕರೆ ಸಂಕಷ್ಟ'ದಲ್ಲಿ ಪಾಕಿಸ್ತಾನ ಸಿಲುಕಿದೆ. ಈಗ ಅಲ್ಲಿ ಒಂದು ಕೆ.ಜಿ ಸಕ್ಕರೆಗೆ ಹೋಲ್ಸೇಲ್ ಬೆಲೆ 140 ರೂಪಾಯಿ ಇದ್ದರೆ, ರಿಟೇಲ್ ಬೆಲೆ 145 ರೂಪಾಯಿ ಇದೆ ಎಂದು ಅಲ್ಲಿನ ಎಆರ್ವೈ ನ್ಯೂಸ್ (ARY News) ವರದಿ ಮಾಡಿದೆ. ಅಂದಹಾಗೆ ಇದು ಅಲ್ಲಿನ ಪ್ರಮುಖ ನಗರವಾದ ಕರಾಚಿಯಲ್ಲಿನ ಬೆಲೆ.
ಸಕ್ಕರೆ ಮಿಲ್ಗಳಿಂದ ಸಕ್ಕರೆ ಪೂರೈಕೆ ನಿಂತುಹೋಗಿರುವ ಕಾರಣದಿಂದ ಈ ರೀತಿಯಲ್ಲಿ ಬೆಲೆ ಹೆಚ್ಚಳವಾಗಿದೆ ಎಂದು ಪಾಕಿಸ್ತಾನದ ಶುಗರ್ ಡೀಲರ್ಸ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ. ಕರಾಚಿ ಮಾತ್ರವಲ್ಲದೇ ಬಹುತೇಕ ಎಲ್ಲಾ ನಗರಗಳಲ್ಲೂ ಕೂಡಾ ಸಕ್ಕರೆ ಬೆಲೆ ಕೆ.ಜಿಗೆ 120 ರೂಪಾಯಿ ದಾಟಿದೆ.