ಸಿಯೋಲ್(ದಕ್ಷಿಣ ಕೊರಿಯಾ):ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಎರಡು ಕ್ಷಿಪಣಿಗಳನ್ನು ಸೆ.15ರಂದು ಉಡಾಯಿಸಿದೆ. ಇನ್ನು ಕ್ಷಿಪಣಿ ಉಡಾವಣೆಯ ಕೆಲ ಫೋಟೋಗಳನ್ನು ಉತ್ತರ ಕೊರಿಯಾ ಮಾಧ್ಯಮ ಇಂದು ಪ್ರಸಾರ ಮಾಡಿದೆ. ಜೊತೆಗೆ ಈ ಉಡಾವಣೆಯನ್ನು 'ನೂತನ ರಕ್ಷಣಾ ಶಕ್ತಿ' ಎಂದು ಬಣ್ಣಿಸಿಕೊಂಡಿದೆ.
ಉತ್ತರ ಕೊರಿಯಾದ 'ಅಕಾಡೆಮಿ ಆಫ್ ನ್ಯಾಷನಲ್ ಡಿಫೆನ್ಸ್ ಸೈನ್' ಪ್ಯಾಂಗಾಂಗ್‌ನಲ್ಲಿ ನಡೆಸಿದ ಯಶಸ್ವಿ ದೂರಗಾಮಿ ಕ್ರೂಸ್ ಕ್ಷಿಪಣಿ ಪರೀಕ್ಷೆಯನ್ನು 'ಆಯಕಟ್ಟಿನ ತಂತ್ರಕುಶಲತೆ ಹೊಂದಿರುವ ಮಹತ್ವದ ಅಸ್ತ್ರ' ಎಂದು ಅಲ್ಲಿನ ಮಾಧ್ಯಮ ಗುಣಗಾನ ಮಾಡಿದೆ.
ಇನ್ನು ಅಮೆರಿಕ ವಿರುದ್ಧ ದೀರ್ಘಕಾಲದಿಂದ ಸಂಘರ್ಷದಲ್ಲಿರುವ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಬಲವನ್ನು ಹೆಚ್ಚಿಸಿಕೊಳ್ಳುವ ಭಾಗವಾಗಿ ಈ ಕ್ಷಿಪಣಿ ಪ್ರಯೋಗ ನಡೆಸಿದೆ ಎನ್ನಲಾಗಿದೆ.
ಕಿಮ್ ಸಹೋದರಿಯ ಖಡಕ್ ಎಚ್ಚರಿಕೆ:
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾದ ಅಧ್ಯಕ್ಷರಿಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ಕ್ಷಿಪಣಿ ಉಡಾವಣೆ ಮಾಡಲಾಗಿದ್ದು, ಅದನ್ನು ಟೀಕಿಸಿದರೆ ದ್ವಿಪಕ್ಷೀಯ ಸಂಬಂಧಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ಹಿಂದೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರು, ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿದಾಗ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಯೋ ಜಾಂಗ್ ಈ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕೊರಿಯಾವು ನಿರ್ದಿಷ್ಟ ದೇಶವನ್ನು ಗುರಿಯಾಗಿಸದೇ, ಆತ್ಮರಕ್ಷಣೆಗಾಗಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇನ್ನು ದಕ್ಷಿಣ ಕೊರಿಯಾ ಸಹ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬುದನ್ನು ಅವರು ಇದೇ ವೇಳೆ, ಉಲ್ಲೇಖಿಸಿ ಕ್ಷಿಪಣಿ ಪ್ರಯೋಗವನ್ನು ಸಮರ್ಥಿಸಿಕೊಂಡು ಪಕ್ಕದ ರಾಷ್ಟ್ರಕ್ಕೆ ತಿರುಗೇಟು ಕೊಟ್ಟಿದ್ದಾರೆ.
ವಿಭಜಿತ ದೇಶಗಳ ನಡುವಿನ ಉದ್ವಿಗ್ನತೆ ಸರಾಗಗೊಳಿಸುವ ಕುರಿತು ಮಾತುಕತೆಗೆ ಕರೆ ನೀಡುವಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಪರಿಚಯಿಸಿದ್ದಕ್ಕಾಗಿ ದಕ್ಷಿಣ ಕೊರಿಯಾದ ಕಪಟತನವನ್ನು ಉತ್ತರ ಕೊರಿಯಾ ಉಲ್ಲೇಖಿಸಿದೆ.