ಕೊಲೊಂಬೊ(ಶ್ರೀಲಂಕಾ):ತೀವ್ರ ಆರ್ಥಿಕ ಸಂಕಷ್ಟದಲ್ಲಿ ನೆರೆಯ ರಾಷ್ಟ್ರ ಶ್ರೀಲಂಕಾ ಸಿಲುಕಿದೆ. ಅಲ್ಲಿನ ಆರ್ಥಿಕ ಬಿಕ್ಕಟ್ಟು ಎಲ್ಲಾ ವಲಯಗಳ ಮೇಲೂ ದುಷ್ಪರಿಣಾಮ ಬೀರಿದೆ. ಕಾಗದ ಮತ್ತು ಇತರ ಪರಿಕರಗಳ ಕೊರತೆಯಿಂದಾಗಿ ಶಾಲಾ ಪಠ್ಯಪುಸ್ತಕಗಳ ಮುದ್ರಣದಲ್ಲಿಯೂ ವಿಳಂಬವಾಗಿದೆ ಎಂದು ಅಲ್ಲಿನ ಶೈಕ್ಷಣಿಕ ಪ್ರಕಟಣೆಗಳ ಇಲಾಖೆ ಆಯುಕ್ತ ಜನರಲ್ ಪಿ.ಎನ್.ಇಳಪೆರುಮ ಹೇಳಿದ್ದಾರೆ.
ಪಠ್ಯ ಪುಸ್ತಕಗಳ ಮುದ್ರಣ ಮಾತ್ರವಲ್ಲ. ಇಂಧನ ಕೊರತೆಯಿಂದಾಗಿ ಮುದ್ರಿಸಿರುವ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ಪಠ್ಯ ಪುಸ್ತಕಗಳ ವಿತರಣೆ ಕಾರ್ಯ ವಿಳಂಬವಾಗುತ್ತಿದೆ ಎಂದು ಅವರು ಡೈಲಿ ಮಿರರ್ಗೆ ಮಾಹಿತಿ ನೀಡಿದ್ದಾರೆ.
ವಿದ್ಯುತ್ ವ್ಯತ್ಯಯವೂ ಕೂಡಾ ಪಠ್ಯಪುಸ್ತಕ ಮುದ್ರಣದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಕೋವಿಡ್ ಸೋಂಕು ಕಾಣಿಸಿಕೊಳ್ಳುವ ಮೊದಲು ಪಠ್ಯಪುಸ್ತಕಗಳ ಮುದ್ರಣದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡಾಗ ಶ್ರೀಲಂಕಾ ಸರ್ಕಾರದ ಮುದ್ರಣ ನಿಗಮ ಮತ್ತು ಖಾಸಗಿ ಮುದ್ರಣಾಲಯಗಳು ಮುಚ್ಚಲ್ಪಟ್ಟಿದ್ದವು.
ಈಗ ಅವುಗಳನ್ನು ತೆರೆಯಲಾಗಿದ್ದು, ಶೇಕಡಾ 45ರಷ್ಟು ಶಾಲಾ ಪಠ್ಯ ಪುಸ್ತಕಗಳನ್ನು ಸರ್ಕಾರದ ಮುದ್ರಣ ನಿಗಮದಲ್ಲಿ ಮುದ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾದ ಶಾಲಾ ಮಕ್ಕಳಿಗೆ ಸುಮಾರು 38 ಮಿಲಿಯನ್ ಪಠ್ಯ ಪುಸ್ತಕಗಳನ್ನು ವಿತರಿಸಬೇಕಾಗಿದೆ. ಈ ವರ್ಷ 32.5 ಮಿಲಿಯನ್ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ:ಉಕ್ರೇನ್, ಅಫ್ಘಾನಿಸ್ತಾನ, ಮಯನ್ಮಾರ್ ವಿಚಾರಗಳ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥರೊಂದಿಗೆ ಶ್ರಿಂಗ್ಲಾ ಚರ್ಚೆ
ಮಕ್ಕಳಿಗೆ ನೀಡಿರುವ ಪುಸ್ತಕಗಳು ಸೇರಿದಂತೆ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಸರ್ಕಾರ 2,338 ಮಿಲಿಯನ್ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಶಾಲಾ ಅವಧಿ ಪ್ರಾರಂಭವಾಗುವ ಮುನ್ನವೇ ಉಳಿದ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಪ್ರಕಟಣೆ ಇಲಾಖೆ ಮುಂದಾಗಿದೆ. ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಕಾಗದ ಕೊರತೆಯಿಂದಾಗಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿರುವುದಾಗಿ ವರದಿಯಾಗಿತ್ತು. ಪರೀಕ್ಷೆಗಳನ್ನು ನಡೆಸಲು ಅಗತ್ಯ ಪೇಪರ್ ಮತ್ತು ಇಂಕ್ ವಿದೇಶದಿಂದ ಲಂಕಾ ನೆಲಕ್ಕೆ ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ ಕಾರಣ ಅಲ್ಲಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು.