ಕೊಲಂಬೊ(ಶ್ರೀಲಂಕಾ):ನೆರೆಯ ರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆಹಾರ ಪದಾರ್ಥಗಳ ಕೊರತೆ ನಡುವೆಯೇ ಇಂಧನ ಕೊರತೆಯೂ ಶ್ರೀಲಂಕಾದಲ್ಲಿ ಕಾಣಿಸಿಕೊಂಡಿದ್ದು, ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ನಡೆಸುತ್ತಿರುವ ಎಲ್ಲಾ ಇಂಧನ ಕೇಂದ್ರಗಳಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೆಟ್ರೋಲ್ ಬಂಕ್ಗಳ ಬಳಿ ದೀರ್ಘವಾದ ಸರತಿ ಸಾಲುಗಳು ಸೃಷ್ಟಿಯಾಗಿವೆ.
ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಗ್ರಾಹಕರ ಸುರಕ್ಷತೆಗಾಗಿ ಮತ್ತು ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಮಿಲಿಟರಿ ವಕ್ತಾರ ನಿಲಂತ ಪ್ರೇಮರತ್ನ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರತಿ ಇಂಧನ ಕೇಂದ್ರದಲ್ಲಿ ಕನಿಷ್ಠ ಇಬ್ಬರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.