ಕೊಲಂಬೊ (ಶ್ರೀಲಂಕಾ): ನೆರೆಯ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಮಕ್ಕಳ ಪರೀಕ್ಷೆಗಳನ್ನು ನಡೆಸಲು ಕಾಗದ ಖರೀದಿಸಲೂ ಸಾಧ್ಯವಾಗಷ್ಟು ದ್ವೀಪ ರಾಷ್ಟ್ರ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿ ಪರೀಕ್ಷೆಗಳನ್ನೇ ಲಂಕಾ ಆಡಳಿತ ರದ್ದು ಮಾಡಿದೆ.
ನಾಳೆಯಿಂದ ಅಂದರೆ ಸೋಮವಾರದಿಂದ ಒಂದು ವಾರ ಕಾಲ ಪರೀಕ್ಷೆಗಳನ್ನು ನಡೆಸಲು ದಿನ ನಿಗದಿ ಮಾಡಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಬೇಕಿತ್ತು. ಆದರೆ, ದೇಶದಲ್ಲಿ ಕಾಗದ ಕೊರತೆ ತೀವ್ರವಾಗಿದೆ. 1948ರ ಸ್ವಾತಂತ್ರ್ಯ ಬಳಿಕ ಎಂದೂ ಕಂಡುಕೇಳರಿಯದಷ್ಟು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದ್ದರಿಂದ ಪರೀಕ್ಷೆಗಳನ್ನು ನಡೆಸಲು ಅಗತ್ಯ ಪೇಪರ್ ಮತ್ತು ಇಂಕ್ ವಿದೇಶದಿಂದ ಲಂಕಾ ನೆಲಕ್ಕೆ ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವೇ ಪರೀಕ್ಷೆಗಳನ್ನು ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ.
ರಾಷ್ಟ್ರದಲ್ಲಿ ಆರ್ಥಿಕ ಸಂಕಷ್ಟ ಇದ್ದು, ಪರೀಕ್ಷೆಗಳ ನಡೆಸಲು ಮುದ್ರಣಕ್ಕೆ ಬೇಕಾದ ಪೇಪರ್ ಹಾಗೂ ಇಂಕ್ ಕೊರತೆ ಇದೆ. ಹೀಗಾಗಿ ಶಾಲೆಗಳ ಪ್ರಾಂಶುಪಾಲರು ಯಾವುದೇ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ಹೇಳಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಬಡ್ತಿ ಪಡೆಯಲು ಈ ಪರೀಕ್ಷೆಗಳು ಪ್ರಮುಖವಾಗಿದೆ. ಆದರೆ, ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದ ದೇಶದ 4.5 ಮಿಲಿಯನ್ (45 ಲಕ್ಷ) ವಿದ್ಯಾರ್ಥಿಗಳಲ್ಲಿ ಮೂರನೇ ಎರಡರಷ್ಟು ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಎಂದು ಹೇಳಲಾಗುತ್ತಿದೆ.