ಮಾಸ್ಕೋ (ರಷ್ಯಾ): ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಕೊರೊನಾ ವಿರುದ್ಧ ಲಸಿಕೆ ತಯಾರಿಸಲು ಹರಸಾಹಸ ಪಡುತ್ತಿವೆ. ಈ ಬೆನ್ನಲ್ಲೇ ತಾವು ತಯಾರಿಸುತ್ತಿರುವ ಸ್ಪುಟ್ನಿಕ್-ವಿ ಲಸಿಕೆ ಶೇಕಡಾ 92ರಷ್ಟು ಯಶಸ್ವಿಯಾಗಿದೆ ಎಂದು ರಷ್ಯಾ ಮಾಹಿತಿ ನೀಡಿದೆ.
ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಈ ರೀತಿಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಜನರನ್ನು ಕೊರೊನಾದಿಂದ ಕಾಪಾಡುವಲ್ಲಿ ಈ ಲಸಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದೆ.
ಸದ್ಯಕ್ಕೆ ಸ್ಪುಟ್ನಿಕ್ ಲಸಿಕೆ ಬೆಲಾರಸ್, ಯುಎಇ, ವೆನಿಜುವೆಲಾ ಮತ್ತಿತರ ದೇಶಗಳಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ಒಳಪಟ್ಟಿದೆ. ಭಾರತದಲ್ಲಿಯೂ ಕೂಡಾ ಪ್ರಯೋಗಗಳು ನಡೆಯುತ್ತಿದ್ದು, ಎರಡು ಮತ್ತು ಮೂರನೇ ಹಂತದ ಪ್ರಯೋಗಗಳು ಇಲ್ಲಿ ನಡೆಯುತ್ತಿವೆ.
ಸುಮಾರು 40 ಸಾವಿರ ಮಂದಿಯನ್ನು ವಿವಿಧ ಹಂತಗಳ ಪ್ರಯೋಗಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ 20 ಸಾವಿರ ಮಂದಿಯನ್ನು ಮೊದಲ ಡೋಸ್ಗೆ ಹಾಗೂ 16 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮೊದಲ ಮತ್ತು ಎರಡನೇ ಡೋಸ್ಗೆ ಪ್ರಯೋಗಕ್ಕಾಗಿ ಬಳಸಲಾಗುತ್ತಿದೆ.
ನಾವು ತಯಾರಿಸುತ್ತಿರುವ ಲಸಿಕೆ ಕೊರೊನಾ ವೈರಸ್ ತಡೆಯಲು ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡುತ್ತಿರುವುದು ಪ್ರಯೋಗಗಳಿಂದ ಗೊತ್ತಾಗುತ್ತಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೋ ಭರವಸೆ ನೀಡಿದ್ದಾರೆ.
ಲಸಿಕೆಯನ್ನು ಕೊರೊನಾ ಪೀಡಿತ ವ್ಯಕ್ತಿಗೆ ನೀಡಿದ 21 ದಿನಗಳ ನಂತರ ಮೊದಲ ಮಧ್ಯಂತರ ವಿಶ್ಲೇಷಣಾ ವರದಿ ಬಂದಿದ್ದು, ಈ ಮೂಲಕ ಸ್ಪುಟ್ನಿಕ್ ಲಸಿಕೆ ಯಶಸ್ವಿಯಾಗಿದೆಯೋ, ಇಲ್ಲವೋ ಎಂಬುದನ್ನು ಅಂದಾಜಿಸಲು ಸಹಕಾರಿಯಾಗಿದೆ.
ಸ್ಪುಟ್ನಿಕ್ ಲಸಿಕೆಯನ್ನು ಕೊರೊನಾಗೆ ಪರಿಪೂರ್ಣ ಲಸಿಕೆಯೆಂದು ಘೋಷಿಸಿ, ಆಗಸ್ಟ್ 11ರಂದೇ ರಷ್ಯಾ ನೋಂದಾಯಿಸಿಕೊಂಡಿತ್ತು. ಈ ಲಸಿಕೆಯನ್ನು ರಷ್ಯಾದ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಗಮಾಲಿಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯೋಲಜಿ ಆ್ಯಂಡ್ ಮೈಕ್ರೋ ಬಯಾಲಜಿ ತಯಾರಿಸುತ್ತಿದೆ.