ಜಗತ್ತನ್ನೇ ನಡುಗಿಸಿರುವ ಕೊರೊನಾ ವೈರಸ್ ಬಗೆಗಿನ ಮಾಹಿತಿಗಳು ನಿಧಾನವಾಗಿ ಒಂದೊಂದಾಗಿ ಹೊರಬರುತ್ತಿರುವಂತೆ ಕಾಣುತ್ತಿದೆ. ಕೆಲ ವರ್ಷಗಳ ಹಿಂದೆ ಸ್ಟೀವನ್ ಸೋಡರಬರ್ಗ್ ಅವರ 'ಕಾಂಟಾಜಿಯನ್' ಸಿನಿಮಾದಲ್ಲಿ ಇಂಥದೇ ವೈರಸ್ ಬಗ್ಗೆ ತೋರಿಸಲಾಗಿತ್ತು. ಆದರೆ, 2018ರಲ್ಲಿ ತಯಾರಾದ ಟೆಲಿ ಸೀರಿಯಲ್ ಒಂದರಲ್ಲಿ ಮ್ಯುಟಂಟ್ ಕೊರೊನಾ ವೈರಸ್ (ಜೀನ್ಸ್ ಮಾರ್ಪಡಿಸಲಾದ ಕೊರೊನಾವೈರಸ್) ಬಗ್ಗೆ ಪ್ರಸ್ತಾಪವಾಗಿರುವುದು ಅಚ್ಚರಿ ಮೂಡಿಸಿದೆ.
2018 ರಲ್ಲಿ ಉತ್ತರ ಕೊರಿಯಾದಲ್ಲಿ ನಿರ್ಮಾಣವಾದ ಈ ಟೆಲಿ ಸೀರಿಯಲ್ 'ಮೈ ಸೀಕ್ರೇಟ್, ಟೆರಿಯಸ್' (My Secret, Terrius) ನಲ್ಲಿ ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರ ಮೊದಲ ಸೀಸನ್ನ ಎಪಿಸೋಡ್ ಒಂದರಲ್ಲಿ ಕೊರೊನಾ ವೈರಸ್ ಬಗ್ಗೆ ಹೇಳಲಾಗಿದೆ. ಈ ಟೆಲಿ ಸೀರಿಯಲ್ ನೆಟ್ಫ್ಲಿಕ್ಸ್ನಲ್ಲಿ ಭಾರತ ಹೊರತು ಪಡಿಸಿ ಹಲವಾರು ರಾಷ್ಟ್ರಗಳಲ್ಲಿ ಲಭ್ಯವಿದೆ.
ಉತ್ತರ ಕೊರಿಯಾದ ಈ ಸೀರಿಯಲ್ನಲ್ಲಿ, ತನ್ನ ನೆರೆಮನೆಯಾತನ ಸಾವಿನ ರಹಸ್ಯವನ್ನು ಭೇದಿಸಲು ವಿಫಲ ಯತ್ನ ನಡೆಸುವ ಸೀಕ್ರೆಟ್ ಏಜೆಂಟ್ ಒಬ್ಬಾತ ಇದ್ದಕ್ಕಿದ್ದಂತೆ ಜಗತ್ತಿನಿಂದ ಕಣ್ಮರೆಯಾಗುತ್ತಾನೆ. ಆರಂಭದಲ್ಲಿ ಇದೊಂದು ಮರ್ಡರ್ ಮಿಸ್ಟರಿ ಕತೆಯಾಗಿ ಕಾಣಿಸಿದರೂ, 53 ನೇ ನಿಮಿಷದಲ್ಲಿ ಕತೆಗೆ ಕೊರೊನಾ ವೈರಸ್ ಟ್ವಿಸ್ಟ್ ಸಿಗುತ್ತದೆ.
ಸೀರಿಯಲ್ನಲ್ಲಿ ಬರುವ ಕುತೂಹಲಕಾರಿ ದೃಶ್ಯದ ಸಂಭಾಷಣೆಗಳು ಹೀಗಿವೆ-
ವೈದ್ಯನೊಬ್ಬ ಇನ್ನೊಬ್ಬ ವ್ಯಕ್ತಿಗೆ ಕೆಲ ದಾಖಲೆಗಳನ್ನು ನೀಡುತ್ತ ಹೇಳುತ್ತಾನೆ- 'ನಾವು ಇನ್ನಷ್ಟು ಸಂಶೋಧನೆಗಳನ್ನು ಮಾಡಬೇಕಿದೆ. ಇದು ಮ್ಯುಟಂಟ್ ಕೊರೊನಾ ವೈರಸ್ ರೀತಿ ಕಾಣುತ್ತಿದೆ.'