ಸಿಂಗಾಪುರ: ಅತ್ಯಂತ ವಿನಾಶಕಾರಿಯಾಗಿರುವ ಹೊಸ ಕೋವಿಡ್ ರೂಪಾಂತರಿ ವೈರಸ್ ಸಿಂಗಾಪುರದಲ್ಲಿ ಪತ್ತೆಯಾಗಿದೆ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ಉಲ್ಲೇಖಿಸಿದ್ದ ಮಾಧ್ಯಮ ವರದಿಗಳನ್ನು ಸಿಂಗಾಪುರ ಸರ್ಕಾರ ಅಲ್ಲಗಳೆದಿದೆ.
ಸೋಂಕು ಮೂರನೇ ಅಲೆ ಮೂಲಕ ಹೊಸ ಕೋವಿಡ್ ರೂಪಾಂತರಿ ವೈರಸ್ ಭಾರತಕ್ಕೆ ಪ್ರವೇಶಿಸಲಿದೆ. ಸಿಂಗಾಪುರದಲ್ಲಿ ಪತ್ತೆಯಾಗಿರುವ ಈ ರೂಪಾಂತರಿ ತಳಿ, ಮಕ್ಕಳಿಗೆ ಅತ್ಯಂತ ಅಪಾಯಕಾರಿ. ಇದು ಮೂರನೇ ಅಲೆ ಸ್ವರೂಪದಲ್ಲಿ ದೆಹಲಿಗೆ ಪ್ರವೇಶಿಸುವ ಸಂಭವವಿದೆ. ಹಾಗಾಗಿ, ಸಿಂಗಾಪುರದೊಂದಿಗಿನ ಎಲ್ಲಾ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ಮಕ್ಕಳಿಗೆ ಅದ್ಯತೆಯ ಮೇಲೆ ಲಸಿಕೆ ವಿತರಣೆ ಮಾಡಬೇಕು ಎಂದು ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ ಕೇಜ್ರಿವಾಲ್ ವಿವರಿಸಿದ್ದರು.
ಇದನ್ನೂಓದಿ: ಹವಾನ ಸಿಂಡ್ರೋಮ್: ತನಿಖೆಗೆ ಮುಂದಾದ ಬೈಡನ್ ಸರ್ಕಾರ
ಇದಕ್ಕೆ ಪ್ರತಿಕ್ರಿಯಿಸಿದ ಸಿಂಗಾಪುರದ ಭಾರತದಲ್ಲಿರುವ ರಾಯಭಾರಿ, ಅಂತಹ ಯಾವುದೇ ವೈರಸ್ ನಮ್ಮಲ್ಲಿ ಪತ್ತೆಯಾಗಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ. ಇತ್ತೀಚೆಗೆ ಎಲ್ಲಾ ಕಡೆ ಹರಡಿರುವ ವೈರಸ್ ಅಂದ್ರೆ, ಅದು ಬಿ.1.617.2 ಆಗಿದೆ. ಈ ವೈರಸ್ ಭಾರತದಲ್ಲಿ ಪತ್ತೆಯಾಗಿದ್ದು, ಸಿಂಗಾಪುರದ ಕೆಲವೊಂದು ಭಾಗಗಳಲ್ಲಿ ಕಂಡುಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಜ್ರಿವಾಲ್ ಮನವಿಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಸಿಂಗಾಪುರದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ವಂದೇ ಭಾರತ್ ಅಭಿಯಾನದಡಿ ಕೆಲವು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದೆ. ವಿಮಾನಯಾನದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.