ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರ ಪಾಲಾಗದೇ ಇದ್ದಿದ್ದರೆ ಇಂದು ಅಫ್ಘಾನಿಸ್ತಾನ ತನ್ನ 102ನೇ ಸ್ವಾತಂತ್ರ್ಯ ದಿನವನ್ನ ಸಂಭ್ರಮದಿಂದ ಆಚರಿಸುತ್ತಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಹದಗೆಟ್ಟಿದೆ.ಇಡೀ ದೇಶವನ್ನೇ ತಾಲಿಬಾನ್ ವಶಪಡಿಸಿಕೊಂಡಿದೆ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಲಾಯನ ಮಾಡುತ್ತಿದ್ದಾರೆ. ಇದರ ನಡುವೆಯೂ ಧ್ವಜ ಹಿಡಿದು ಬಂದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದ ರಾಜಧಾನಿ ಅಸದಾಬಾದ್ನಲ್ಲಿ ನೂರಾರು ಜನರು 102ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜ ಹಿಡಿದು ರ‍್ಯಾಲಿ ಮಾಡುತ್ತಿದ್ದರು. ಅಲ್ಲದೇ ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್‌ನಲ್ಲಿ ತಾಲಿಬಾನ್ ವಿರುದ್ಧ ಕೆಲವರು ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಕ್ರೂರಿ ಉಗ್ರರು ಇವರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಈ ವೇಳೆ ಹಲವರು ಮೃತಪಟ್ಟಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.