ಸಿಯೋಲ್:ದಕ್ಷಿಣ ಕೊರಿಯಾ ಮೊದಲ ಬಾರಿಗೆ ದೇಶೀಯವಾಗಿ ತಯಾರಿಸಿದ 'ನೂರಿ' ಉಪಗ್ರಹವನ್ನು ಗುರುವಾರ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.
ಹವಾಮಾನ ಮತ್ತು ಇತರ ಪರಿಸ್ಥಿತಿಗಳು ಹೊಂದಾಣಿಕೆಯಾದರೆ ಮೂರು ಹಂತದ ನೂರಿ ರಾಕೆಟ್ ಅನ್ನು ಡಮ್ಮಿ ಪೇಲೋಡ್-1.5 ಟನ್ ಸ್ಟೇನ್ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಬ್ಲಾಕ್ ಅನ್ನು ಭೂಮಿಯಿಂದ 600ರಿಂದ 800 ಕಿಲೋಮೀಟರ್ (372 ರಿಂದ 497 ಮೈಲಿ) ಕಕ್ಷೆಗೆ ತಲುಪಿಸುವ ಗುರಿಯೊಂದಿಗೆ ಸಂಜೆ 5 ಗಂಟೆಗೆ ಉಡಾಯಿಸುವ ನಿರೀಕ್ಷೆಯಿದೆ.
ರಾಕೆಟ್ ಒಳಗೆ ಕೆಲವು ವಾಲ್ವ್‌ಗಳನ್ನು ಪರೀಕ್ಷಿಸಲು ಎಂಜಿನಿಯರ್‌ಗಳಿಗೆ ಹೆಚ್ಚಿನ ಸಮಯ ಬೇಕಾಗಿದ್ದರಿಂದ ರಾಕೆಟ್ ಉಡಾವಣೆ ಸಮಯ ನಿಗದಿ ವಿಳಂಬವಾಗಿದೆ ಎಂದು ದಕ್ಷಿಣ ಕೊರಿಯಾದ ಉಪ ವಿಜ್ಞಾನ ಸಚಿವ ಯೊಂಗ್ ಸುದ್ದಿಗಾರರಿಗೆ ತಿಳಿಸಿದರು. ಯಾವುದೇ ಸಮಸ್ಯೆಗಳು ತಕ್ಷಣವೇ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ನರೋ ಬಾಹ್ಯಾಕಾಶ ಕೇಂದ್ರದ ಉಡಾವಣೆ ಸಾಧ್ಯತೆ
ಇಂಜಿನಿಯರ್‌ಗಳು ಬುಧವಾರ ರಾತ್ರಿ 47 ಮೀಟರ್ (154 ಅಡಿ) ರಾಕೆಟ್ ಅನ್ನು ದಕ್ಷಿಣದ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ ದೇಶದ ಏಕೈಕ ಬಾಹ್ಯಾಕಾಶ ನಿಲ್ದಾಣವಾದ ನರೋ ಬಾಹ್ಯಾಕಾಶ ಕೇಂದ್ರದ ಉಡಾವಣಾ ಪ್ಯಾಡ್‌ನಲ್ಲಿ ಇರಿಸಿದ್ದಾರೆ.
1990ರ ದಶಕದ ಆರಂಭದಿಂದಲೂ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಇತರ ದೇಶಗಳನ್ನು ಅವಲಂಬಿಸಿದ ದಕ್ಷಿಣ ಕೊರಿಯಾ, ಇದೀಗ ತನ್ನದೇ ತಂತ್ರಜ್ಞಾನದೊಂದಿಗೆ ನೂರಿ ರಾಕೆಟ್ ಮೂಲಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ 10ನೇ ರಾಷ್ಟ್ರವಾಗಲು ಪ್ರಯತ್ನಿಸುತ್ತಿದೆ. 'ನೂರಿ' ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾದ ದೇಶದ ಮೊದಲ ಬಾಹ್ಯಾಕಾಶ ಉಡಾವಣಾ ವಾಹನ.