ನವದೆಹಲಿ:ಭಾರತದ ಗುಪ್ತಚರ ಸಂಸ್ಥೆಯಾದ ರಾ (RAW) ಮತ್ತು ಚೀನಾ ಗುಪ್ತಚರ ಇಲಾಖೆಯಾದ ಎಂಎಸ್ಎಸ್ ( Ministry of State Security) ಸಂಸ್ಥೆಯೊಂದಿಗೆ ರಷ್ಯಾದ ವಿದೇಶಿ ಗುಪ್ತಚರ ಸಂಸ್ಥೆಯಾದ ಎಸ್‌ವಿಆರ್ ಸಹಕಾರ ಸಂಬಂಧ ಹಾಗೂ 'ತ್ರಿಪಕ್ಷೀಯ ಸ್ವರೂಪದ ಸಭೆಗಳು' ಒಂದು ರೀತಿಯಲ್ಲಿ ನಿರ್ದಿಷ್ಟ ಮೌಲ್ಯ ಹೊಂದಿವೆ ಎಂದು ಎಸ್‌ವಿಆರ್ ಮುಖ್ಯಸ್ಥ ಸೆರ್ಗೆಯ್ ನರಿಶ್ಕಿನ್ ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದ ರಹಸ್ಯ ಬೇಹುಗಾರಿಕಾ ಸಂಸ್ಥೆಯಾದ ಎಸ್‌ವಿಆರ್ 101 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೆರ್ಗೆಯ್ ನರಿಶ್ಕಿನ್ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ.
ಸೆರ್ಗೆಯ್ ನರಿಶ್ಕಿನ್ ತ್ರಿಪಕ್ಷೀಯ ಸ್ವರೂಪದ ಸಭೆಗಳು ಎಂದು ಹೇಳಿರುವುದು ಆರ್ಐಸಿ (RIC) ಬಗ್ಗೆ ಇರಬಹುದು ಎಂದು ಹೇಳಲಾಗುತ್ತಿದೆ. ಆರ್ಐಸಿ ಎಂದರೆ ರಷ್ಯಾ, ಇಂಡಿಯಾ, ಚೀನಾ ದೇಶಗಳು ರಾಜಕೀಯ ಹಿತಾಸಕ್ತಿಯ ರಕ್ಷಣೆಗಾಗಿ ಕಟ್ಟಿಕೊಂಡಿದ್ದ ಸಮೂಹವಾಗಿದ್ದು, ಭಾರತ ಮತ್ತು ಚೀನಾದ ನಡುವೆ ಅಸಮಾಧಾನ ಹೊಗೆಯಾಡುತ್ತಿರುವ ಕಾರಣದಿಂದ ಈಗ ಅದರ ಪ್ರಾಬಲ್ಯ ಕಡಿಮೆಯಾಗಿದೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತವು ಅಮೆರಿಕಕ್ಕೆ ಹತ್ತಿರವಾಗುತ್ತಿರುವಂತೆ ಕಂಡುಬರುತ್ತಿದೆ. ಇನ್ನೊಂದೆಡೆ ಚೀನಾದೊಂದಿಗಿನ ಅದರ ಸಂಬಂಧವು ಪ್ರಕ್ಷುಬ್ಧವಾಗಿದೆ. ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ತಮ್ಮ ತಮ್ಮ ಗಡಿಗಳಲ್ಲಿ ಸೈನಿಕರ ನಿಯೋಜನೆ ಮಾಡಿರುವುದು ಒಂದೆಡೆಯಾದರೆ, ಅಮೆರಿಕಕ್ಕೆ ಭಾರತ ಹತ್ತಿರಾಗುವಂತೆ ತೋರುತ್ತಿರುವುದು ಆರ್ಐಸಿ ದುರ್ಬಲಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.