ಮಾಸ್ಕೋ (ರಷ್ಯಾ):ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ (International Space Station- ISS) ಏಳು ಗಗನಯಾತ್ರಿಗಳಿಗೆ ಸೋಮವಾರ ರಷ್ಯಾದ 'ಬಾಹ್ಯಾಕಾಶ ತ್ಯಾಜ್ಯ' (Space Junk) ಬೆದರಿಕೆ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೆರಿಕದ ನಾಲ್ವರು, ಜರ್ಮನಿಯ ಒಬ್ಬರು ಹಾಗೂ ರಷ್ಯಾದ ಇಬ್ಬರು ಗಗನಯಾತ್ರಿಗಳು (astronauts) ಇದ್ದಾರೆ. ಇವರು ತಮ್ಮ ವಾಹನಗಳಲ್ಲೇ ತಂಗುವಂತೆ ಬಾಹ್ಯಾಕಾಶ ನಿಯಂತ್ರಕರು ನಿರ್ದೇಶನ ನೀಡಿದ್ದಾರೆ. ಐಎಸ್ಎಸ್ನಲ್ಲಿ ಸೃಷ್ಟಿಯಾಗಿರುವ ತ್ಯಾಜ್ಯದಿಂದ ತೊಂದರೆಯಾಗಿದ್ದು, ಅವರ ಸುಲಲಿತ ಕೆಲಸಗಳಿಗೆ ಇದು ಅಡ್ಡಿಯನ್ನುಂಟು ಮಾಡಿದೆ. ಇನ್ನೂ ಒಂದೆರಡು ದಿನಗಳವರೆಗೆ ಈ ಅಡ್ಡಿ ಮುಂದುವರಿಯಬಹುದು. ಗಗನಯಾತ್ರಿಗಳ ವಿಜ್ಞಾನ ಸಂಶೋಧನೆ ಮತ್ತು ಇತರ ಕೆಲಸಕ್ಕೂ ತೊಂದರೆ ಆಗಬಹುದು ಎಂದು ಅಮೆರಿಕ ಬಾಹ್ಯಾಕಾಶ ಕಮಾಂಡ್ ಹೇಳಿದೆ.
ರಷ್ಯಾದ ಬಾಹ್ಯಾಕಾಶ ತ್ಯಾಜ್ಯ
ನಿನ್ನೆ ರಷ್ಯಾ ಕಕ್ಷೆಯಲ್ಲಿದ್ದ ತನ್ನದೇ ಸ್ವಂತ ಉಪಗ್ರಹವೊಂದನ್ನು ಸ್ಫೋಟಿಸಿದ ಕಾರಣ ಬಾಹ್ಯಾಕಾಶದಲ್ಲಿ ಅವಶೇಷಗಳು/ತ್ಯಾಜ್ಯಗಳು ಸೃಷ್ಟಿಯಾಗಿತ್ತು. 1500ಕ್ಕೂ ಹೆಚ್ಚು ತ್ಯಾಜ್ಯದ ಚೂರುಗಳಾಗಿ ಮಾರ್ಪಟ್ಟಿತ್ತು. ಈ ಬಾಹ್ಯಾಕಾಶ ತ್ಯಾಜ್ಯಗಳು ಅಪಾಯಕಾರಿಯಾಗಿದ್ದು, ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳ ಕಾರ್ಯಕ್ಕೆ ತಡೆಯೊಡ್ಡಿದೆ. ಹೀಗಾಗಿ ರಷ್ಯಾದ ಗಗನಯಾತ್ರಿಗಳು ಸೋಯುಜ್ MS-18 ಕ್ಯಾಪ್ಸುಲ್‌ನಲ್ಲಿ ತಂಗಿದ್ದು, ಅಮೆರಿಕದ ನಾಲ್ವರು ಗಗನಯಾತ್ರಿಗಳು ಕಕ್ಷೆಯ ಹೊರ ನಿಲ್ದಾಣಕ್ಕೆ ಬಂದಿದ್ದಾರೆ.