ಇಸ್ಲಾಮಾಬಾದ: ಇಟಲಿಗಿಂತಲೂ ಹೆಚ್ಚು ಕೊರೊನಾ ವೈರಸ್ ಬಾಧಿತವಾಗುವ ಎಲ್ಲ ಲಕ್ಷಣಗಳನ್ನು ತೋರುತ್ತಿರುವ ಪಾಕಿಸ್ತಾನ, ಸಮಯ ಮೀರುವ ಮುನ್ನ ಬುದ್ಧಿ ಕಲಿಯುವ ಹಾಗೆ ಕಾಣುತ್ತಿಲ್ಲ. ಮೊದಲೇ ಅತ್ಯಂತ ಕಳಪೆ ಆರೋಗ್ಯ ವ್ಯವಸ್ಥೆ ಹೊಂದಿರುವ ದೇಶಕ್ಕೆ ತಾನೇನು ಮಾಡುತ್ತಿರುವೆ ಎಂಬುದರ ಗೊತ್ತು ಗುರಿಯೇ ಇಲ್ಲದಂತಾಗಿದೆ.
ಇಡೀ ಜಗತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ತಲೆಕೆಡಿಸಿಕೊಂಡಿದ್ದರೂ ಈ ದೇಶ ಬೇರೆತ್ತಲೋ ಸಾಗುತ್ತಿದೆ. ಲಾಹೋರ್ನಲ್ಲಿ ಬೃಹತ್ ಧಾರ್ಮಿಕ ಸಮ್ಮೇಳನ ನಡೆಸಲು ಅನುಮತಿ ನೀಡುವ ಮೂಲಕ ಪಾಕ್ ಲಕ್ಷಾಂತರ ಜನರ ಜೀವದ ಜೊತೆ ಚೆಲ್ಲಾಟವಾಡಿದೆ. ಈ ಸಮ್ಮೇಳನದಲ್ಲಿ ಸ್ಥಳೀಯರು ಸೇರಿದಂತೆ ದೇಶ-ವಿದೇಶಗಳಿಂದ ಆಗಮಿಸಿದ ಸುಮಾರು ಎರಡೂವರೆ ಲಕ್ಷ ಜನ ಪಾಲ್ಗೊಂಡಿದ್ದರು.
ಮುಸ್ಲಿಂ ರಾಷ್ಟ್ರಗಳಾದ ಇರಾನ್ ಹಾಗೂ ಸೌದಿ ಅರೇಬಿಯಾದಂಥ ದೇಶಗಳು ಕೂಡ ಎಲ್ಲ ರೀತಿಯ ಸಮಾವೇಶಗಳಿಗೆ ಬ್ರೇಕ್ ಹಾಕಿವೆ. ಆದರೆ ಸ್ಥಳೀಯ ತಬ್ಲೀಘಿ ಜಮಾತ್ ತಬ್ಲೀಘಿ ಇಜ್ತೆಮಾ ಸಮಾವೇಶಕ್ಕೆ ತಡೆ ಒಡ್ಡಲು ಪಾಕ್ ಸರ್ಕಾರ ಪ್ರಯತ್ನಿಸಲೇ ಇಲ್ಲ.