ಕಾಬೂಲ್(ಅಫ್ಘಾನಿಸ್ತಾನ):ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ನಾಯಕ ಅಹ್ಮದ್ ಮಸೂದ್ ತಜಿಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ ಎಂದು ತಾಲಿಬಾನ್ ಹೇಳಿಕೆ ನೀಡಿದ ಬೆನ್ನಲ್ಲೇ ಕೆಲವು ಸುದ್ದಿಸಂಸ್ಥೆಗಳು ಅಹ್ಮದ್ ಮಸೂದ್ ಅಫ್ಘಾನಿಸ್ತಾನವನ್ನು ತೊರೆದಿಲ್ಲ ಎಂದು ವರದಿ ಮಾಡಿವೆ.
ಅಹ್ಮದ್ ಮಸೂದ್ ಆಫ್ಘಾನಿಸ್ತಾನವನ್ನು ಬಿಟ್ಟು ಟರ್ಕಿ ಅಥವಾ ಬೇರೆ ಯಾವುದೇ ಪ್ರದೇಶಕ್ಕೆ ಹೋಗಿರುವುದು ವದಂತಿಯಷ್ಟೇ. ಆತ ಸುರಕ್ಷಿತ ಸ್ಥಳದಲ್ಲಿದ್ದು, ಪಂಜ್ಶೀರ್ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಫಾರ್ಸ್ ಸುದ್ದಿಸಂಸ್ಥೆಯು ಮೂಲವೊಂದನ್ನು ಉಲ್ಲೇಖಿಸಿ ಮಾಹಿತಿ ನೀಡಿದೆ.
ಸೆಪ್ಟೆಂಬರ್ 6ರಂದು ಮಾಧ್ಯಮಗಳಿಗೆ ಮಾಹಿತಿ ಕಳುಹಿಸಿದ್ದ ಪಂಜ್ಶೀರ್ ನಾಯಕ ಮಸೂದ್ ತಾಲಿಬಾನ್ ವಿರುದ್ಧ ದಂಗೆಯೇಳಲು ಜನರಿಗೆ ಕರೆ ನೀಡಿದ್ದರು. ದೇಶದ ಒಳಗೆ, ಹೊರಗೆ, ಎಲ್ಲಿದ್ದರೂ ನಮ್ಮ ದೇಶದ ಘನತೆ, ಸ್ವಾತಂತ್ರ್ಯ ಮತ್ತು ಸಮೃದ್ಧಿಗಾಗಿ ಹೋರಾಡಿ ಎಂದು ಜನರಲ್ಲಿ ಮನವಿ ಮಾಡಿದ್ದರು.