ಬೀಜಿಂಗ್: ಚೀನಾದ ಹೆನಾನ್ನಲ್ಲಿ ವರುಣನಾರ್ಭಟ ಜೋರಾಗಿದ್ದು, ಜನ -ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಪರ್ಯಾಸ ಎಂದರೆ ಇಷ್ಟೊಂದು ಪ್ರಮಾಣದ ಮಳೆಯಾಗಿರುವುದು ಸಾವಿರ ವರ್ಷದಲ್ಲಿ ಇದೇ ಮೊದಲ ಬಾರಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಾವಿನ ಸಂಖ್ಯೆ ಏರುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕಂಡು ಕೇಳರಿಯದ ಸುರಿದ ಮಳೆಗೆ ನಿನ್ನೆ 12 ಜನರು ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಸುಮಾರು 10,00,00 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.ಇದೀಗ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಏಳು ಮಂದಿ ಕಾಣೆಯಾಗಿದ್ದಾರೆಂದು ವರದಿಯಾಗಿದೆ.
ಕ್ಸಿನ್‌ಸಿಯಾಂಗ್ ನಗರವು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದ್ದು, 2,600ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ. ಹೆನಾನ್ ಪ್ರಾಂತ್ಯದಲ್ಲಿ 160,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಕೆಲವು ಭಾಗಗಳು ದಾಖಲೆಯ ಮಳೆಯಿಂದ ಮುಳುಗಿ ಮಾರಣಾಂತಿಕ ಪ್ರವಾಹಕ್ಕೆ ಕಾರಣವಾದ ನಂತರ ಚೀನಾದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ರಕ್ಷಣಾ ತಂಡಗಳನ್ನು ಪ್ರವಾಹದ ಪ್ರದೇಶಕ್ಕೆ ರವಾನಿಸಿದ್ದಾರೆ.