ಇಸ್ಲಾಮಾಬಾದ್(ಪಾಕಿಸ್ತಾನ್):ಪಾಕಿಸ್ತಾನದಲ್ಲಿ ಭದ್ರತೆ ಉಲ್ಲಂಘನೆ ಮೂಲಕ ಅಲ್ಲಿನ ಅಧಿಕಾರಿಗಳು ದೊಡ್ಡ ಎಡವಟ್ಟು ಮಾಡಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರ ಕಾರಿನ ಮೇಲೆ ಅಪರಿಚತ ವ್ಯಕ್ತಿಗಳು ಗುಂಡುಹಾರಿಸಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಬಗ್ಗೆ ರೆಹಮ್ ಖಾನ್ ಟ್ವೀಟ್ ಮಾಡಿದ್ದು, ಮಾಜಿ ಪತಿ ಹಾಗೂ ಹಾಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ಸೋದರಳಿಯನ ಮದುವೆಗೆ ಹೋಗಿ ವಾಪಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಕಾರಿಗೆ ಗುಂಡು ಹಾರಿಸಿದರು. ಅದೇ ವೇಳೆಗೆ ನಾನು ವಾಹನ ಬದಲಾಯಿಸಿದ್ದೆ. ನನ್ನ ಪಿಎಸ್ ಹಾಗೂ ಡ್ರೈವರ್ ಕಾರಿನಲ್ಲಿದ್ದರು. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನವೇ? ಹೇಡಿಗಳು, ಕೊಲೆಗಡುಕರು ಹಾಗೂ ದುರಾಸೆಯ ಸ್ಥಿತಿಗೆ ಸ್ವಾಗತ ಎಂದು ರೆಹಮ್ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಸಾವು ಅಥವಾ ಗಾಯದ ಭಯವಿಲ್ಲ. ಆದರೆ, ನನಗಾಗಿ ಕೆಲಸ ಮಾಡುವವರ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇಸ್ಲಾಮಾಬಾದ್‌ನ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಪ್ರತಿಯ ಹಂಚಿಕೊಂಡಿದ್ದಾರೆ. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬೆಳಗ್ಗೆ 9 ಗಂಟೆಯಾಗಿದೆ. ನನ್ನ ಪಿಎಸ್ ಮತ್ತು ತಂಡವು ಒಂದು ನಿಮಿಷವೂ ನಿದ್ರೆ ಮಾಡಿಲ್ಲ. ಇಸ್ಲಾಮಾಬಾದ್ ಶಮ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಇನ್ನೂ ದಾಖಲಾಗಿಲ್ಲ. ತನಿಖೆ ನಡೆಯುತ್ತಿದೆ. ಎಫ್‌ಐಆರ್ ಪ್ರತಿಗಾಗಿ ಕಾಯಲಾಗುತ್ತಿದೆ ಎಂದು ಬ್ರಿಟಿಷ್-ಪಾಕಿಸ್ತಾನ ಮೂಲದ ಪತ್ರಕರ್ತೆ, ಮಾಜಿ ಟಿವಿ ನಿರೂಪಕಿ ಹೇಳಿದ್ದಾರೆ. 2014ರಲ್ಲಿ ಇಮ್ರಾನ್ ಖಾನ್‌ರನ್ನು ವಿವಾಹವಾಗಿದ್ದ 48 ವರ್ಷದ ರೆಹಮ್ ಖಾನ್ 2015ರ ಅಕ್ಟೋಬರ್ 30ರ ವರೆಗೆ ಅವರೊಂದಿಗೆ ಸಾಂಸಾರಿಕ ಜೀವನ ನಡೆಸಿದ್ದರು.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಸಮುದಾಯ ಹಂತಕ್ಕೆ ಒಮಿಕ್ರಾನ್: ಫೆಬ್ರವರಿ ಮಧ್ಯ ಭಾಗದಲ್ಲಿ 5ನೇ ಅಲೆ ಸಾಧ್ಯತೆ!