ಇಸ್ಲಾಮಾಬಾದ್: ಜಿ20 ಶೃಂಗಸಭೆಗಾಗಿ ಇಟಲಿಗೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿವಿಐಪಿ ವಿಮಾನ ಶುಕ್ರವಾರ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಹಾರಿದೆ. ಇಸ್ಲಾಮಾಬಾದ್‌ನಿಂದ ಔಪಚಾರಿಕ ಅನುಮತಿ ಪಡೆದ ನಂತರವೇ ವಿಮಾನವು ಹಾರಾಟ ನಡೆಸಿದೆ. ವಿಮಾನ ಮರಳುವಾಗ ಮತ್ತೆ ಈ ವಾಯು ಪ್ರದೇಶ ಬಳಸಲಿದೆ ಎಂದು The Express Tribune ಮಾಧ್ಯಮ ವರದಿ ಮಾಡಿದೆ.
ಪ್ರಧಾನಿ ಮೋದಿಯವರ ಬೋಯಿಂಗ್ 777, 300ER, K7066 ವಿಮಾನವು ಬಹವಲ್‌ಪುರದಿಂದ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು, ಟರ್ಬತ್ ಮತ್ತು ಪಂಜ್‌ಗುರ್ ಮೂಲಕ ಹಾದು ಇರಾನ್ ಮತ್ತು ಟರ್ಕಿ ಮೂಲಕ ಇಟಲಿಯನ್ನು ತಲುಪಿದೆ.
ನಾಗರಿಕ ವಿಮಾನಯಾನ ಪ್ರಾಧಿಕಾರ ಮೂಲಗಳ ಪ್ರಕಾರ, ಮೋದಿ ಅವರ ವಿಶೇಷ ವಿಮಾನಕ್ಕಾಗಿ ವಾಯುಪ್ರದೇಶವನ್ನು ಬಳಸಲು ಅನುಮತಿಗಾಗಿ ಭಾರತೀಯ ಅಧಿಕಾರಿಗಳು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದ್ದರು. ಪಾಕಿಸ್ತಾನದ ಅಧಿಕಾರಿಗಳು ಈ ಮನವಿಯನ್ನು ಒಪ್ಪಿಕೊಂಡರು ಮತ್ತು, ಭಾರತದ ಪ್ರಧಾನಿಗೆ ತಮ್ಮ ವಾಯುಪ್ರದೇಶದ ಮೂಲಕ ಹಾರಲು ಅವಕಾಶ ಮಾಡಿಕೊಟ್ಟರು.
ಪಾಕ್ ವಾಯುನೆಲೆ ಮೇಲೆ ಸಂಚರಿಸಿ ಇಟಲಿ ತಲುಪಿದ ಪ್ರಧಾನಿ ಮೋದಿ 2019 ರ ಆಗಸ್ಟ್‌ನಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಂಡ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಟ್ಟಿವೆ. ಇದರ ನಡುವೆ ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಇಸ್ಲಾಮಾಬಾದ್‌ನೊಂದಿಗೆ ಸಾಮಾನ್ಯ ನೆರೆಯ ಸಂಬಂಧಗಳನ್ನು ಬಯಸುವುದಾಗಿ ಭಾರತವು ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ಹೇಳಲಾಗ್ತಿದೆ.
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಶುಕ್ರವಾರ ಇಟಲಿಗೆ ತೆರಳಿದ್ದಾರೆ. ಇನ್ನು ಗ್ಲಾಸ್ಗೋದಲ್ಲಿ ಹವಾಮಾನ ಶೃಂಗಸಭೆಯ ನಂತರ ಭಾರತಕ್ಕೆ ಹಿಂದಿರುಗುವ ವಿಮಾನವು ಮತ್ತೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುತ್ತದೆ ಎಂದು ಸಿಎಎ ವಕ್ತಾರರ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಅಕ್ಟೋಬರ್ 2019 ರಲ್ಲಿ ಮೋದಿ ಸೌದಿ ಅರೇಬಿಯಾಕ್ಕೆ ಹಾರಲು ತನ್ನ ವಾಯುಪ್ರದೇಶವನ್ನು ಬಳಸುವ ಭಾರತದ ವಿನಂತಿಯನ್ನು ಪಾಕಿಸ್ತಾನ ನಿರಾಕರಿಸಿತ್ತು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನವು ಪ್ರಧಾನಿಯವರ ವಿಮಾನಕ್ಕೆ ಓವರ್‌ಫ್ಲೈಟ್ ಅನುಮತಿಯನ್ನೂ ನಿರಾಕರಿಸಿತ್ತು.