ನವದೆಹಲಿ:ಕಳೆದ ದಿನಗಳಿಂದ ದೀರ್ಘ ಕೋಮಾ ಸ್ಥಿತಿಯಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನವಾಗಿದ್ದು, ಇಡೀ ದೇಶವೇ ಸಂತಾಪ ಸೂಚಿಸಿದೆ. 84 ವರ್ಷದ ಭಾರತದ ರಾಜಕೀಯ ಮುತ್ಸದ್ದಿ, ಹಿರಿಯ ರಾಜಕಾರಣಿ ನಿಧನಕ್ಕೆ ವಿವಿಧ ದೇಶಗಳ ಮುಖಂಡರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಟ್ವೀಟ್ ಮಾಡಿದ್ದು, ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅಲ್ಲಿನ ಸರ್ಕಾರ, ಭಾರತದ ಜನರಿಗೆ ಹಾಗೂ ದುಃಖಿತ ಕುಟುಂಬದ ಸದಸ್ಯರಿಗೆ ಹೃತ್ಪೂರ್ವಕ ಸಂತಾಪ ಎಂದಿದ್ದಾರೆ.
ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಸಂತಾಪ ಸೂಚಿಸಿದ್ದು, ಭೂತಾನ್ ಜನರ ಪರವಾಗಿ, ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಆಳವಾದ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಮಹೇಂದ್ ರಾಜಪಕ್ಸೆ ಕೂಡ ಟ್ವೀಟ್ ಮಾಡಿದ್ದು, ಎಲ್ಲರಿಂದಲೂ ಪ್ರಿತಿಸಲ್ಪಡುವ ಭಾರತ ರತ್ನ, ಶ್ರೀ ಪಣಬ್ ಮುಖರ್ಜಿ ಓರ್ವ ಮುತ್ಸದ್ದಿ ಶ್ರೇಷ್ಠ ರಾಜಕಾರಣಿ, ಬರಹಗಾರ ಮತ್ತು ಎಲ್ಲರೂ ಪ್ರೀತಿಸುವ ವ್ಯಕ್ತಿ. ರಾಷ್ಟ್ರಕ್ಕೆ ಅವರ ಸೇವೆ ಅಪಾರ ಎಂದಿದ್ದಾರೆ.
ಯುಎಸ್ ರಾಯಭಾರಿ ಕಚೇರಿ ಕೂಡ ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದು, ಪ್ರಣಬ್ ಮುಖರ್ಜಿ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಅವರ ಸುದೀರ್ಘವಾದ ಸಾರ್ವಜನಿಕ ಸೇವೆಯಲ್ಲಿ ಯುಎಸ್-ಇಂಡಿಯಾ ಸಂಬಂಧಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಕೆನ್ ಜಸ್ಟರ್ ಟ್ವೀಟ್ ಮಾಡಿದ್ದಾರೆ.