ಢಾಕಾ(ಬಾಂಗ್ಲಾದೇಶ):ಉಕ್ರೇನ್ನ ವಿವಿಧ ನಗರಗಳಲ್ಲಿ ಸಮಸ್ಯೆಗೆ ಸಿಲುಕಿಕೊಂಡಿದ್ದ ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಬಾಂಗ್ಲಾದೇಶದ ವಿದ್ಯಾರ್ಥಿಗಳನ್ನ ರಕ್ಷಣೆ ಮಾಡುವಲ್ಲಿ ಭಾರತದ ರಾಯಭಾರ ಕಚೇರಿ ಯಶಸ್ವಿಯಾಗಿದೆ. ಇದಕ್ಕೆ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಬಾಂಗ್ಲಾದೇಶದ 9 ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿರುವುದಕ್ಕೆ ಶೇಖ್ ಹಸೀನಾ ಅವರು ಭಾರತದ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿರಿ:ಉಕ್ರೇನ್ನಿಂದ ಪಾಕ್ ವಿದ್ಯಾರ್ಥಿನಿ ರಕ್ಷಣೆ.. ಮೋದಿ, ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಹೇಳಿದ ಅಸ್ಮಾ!
ಉಕ್ರೇನ್ - ರಷ್ಯಾ ನಡುವೆ ಬಿಕ್ಕಟ್ಟು ಉಂಟಾಗಿದಾಗಿನಿಂದಲೂ ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಹೆಸರಿನಲ್ಲಿ ರಕ್ಷಣಾ ಕಾರ್ಯಚರಣೆ ಮಾಡ್ತಿದ್ದು, ಇಲ್ಲಿಯವರೆಗೆ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತಂದಿದೆ. ಇದೇ ಕಾರ್ಯಾಚರಣೆ ಮೂಲಕ ನೇಪಾಳ, ಟುನಿಶಿಯಾ, ಬಾಂಗ್ಲಾದೇಶದ ವಿದ್ಯಾರ್ಥಿಗಳಿಗೂ ಕೂಡಾ ಭಾರತ ಸರ್ಕಾರ ಸಹಾಯ ಮಾಡುತ್ತಿದೆ. ಭಾರತೀಯ ರಾಯಭಾರ ಕಚೇರಿಗಳ ಸಹಾಯದಿಂದ ವಿವಿಧ ದೇಶಗಳ ವಿದ್ಯಾರ್ಥಿಗಳು ಸುರಕ್ಷಿತವಾಗಿ ಗಡಿಭಾಗಕ್ಕೆ ತೆರಳಿ, ಅಲ್ಲಿಂದ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.