ಢಾಕಾ ( ಬಾಂಗ್ಲಾದೇಶ) : ಮಕ್ಕಳಾದ ಶೇಖ್ ಹಸೀನಾ ಮತ್ತು ಶೇಖ್ ರೆಹಾನಾ ಮೂಲಕ 2020 ನೇ ಸಾಲಿನ 'ಗಾಂಧಿ ಶಾಂತಿ ಪ್ರಶಸ್ತಿ'ಯನ್ನು ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜೀಬುರ್ ರೆಹಮಾನ್ ಅವರಿಗೆ ಪ್ರಧಾನಿ ಮೋದಿ ನೀಡಿದರು.
ಬಾಂಗ್ಲಾ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಮತ್ತು ‘ಬಂಗಬಂಧು’ ಶೇಖ್ ಮುಜೀಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಹಾಗೂ ಪ್ರಧಾನಿ ಶೇಖ್ ಹಸೀನಾ ಜೊತೆ ಮಾತುಕತೆ ನಡೆಸುವ ಸಲುವಾಗಿ ಮೋದಿ ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡಿದ್ದಾರೆ.
ರಾಷ್ಟ್ರೀಯ ಪರೇಡ್ ಚೌಕ್ನಲ್ಲಿ ಬಾಂಗ್ಲಾದೇಶದ 50 ನೇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮುಜೀಬುರ್ ರೆಹಮಾನ್ ಅವರಿಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡುತ್ತಿರುವುದು ಭಾರತಕ್ಕೆ ಗೌರವವಾಗಿದೆ ಎಂದು ಹೇಳಿದರು.
ಓದಿ : ಢಾಕಾದಲ್ಲಿ ಮೋದಿ: ರಾಷ್ಟ್ರೀಯ ಪರೇಡ್ ಮೈದಾನಕ್ಕೆ ಆಗಮನ
ಬಾಂಗ್ಲಾದೇಶದ ರಾಷ್ಟ್ರಪಿತನಿಗೆ ಗೌರವ ಸೂಚಿಸುವ ಸಲುವಾಗಿ 'ಮುಜೀಬ್ ಜಾಕೆಟ್' ಧರಿಸಿದ್ದ ಮೋದಿ, ಬಂಗಬಂಧುವಿನ ನಾಯಕತ್ವ ಮತ್ತು ಧೈರ್ಯವು, ಯಾವುದೇ ಶಕ್ತಿಯು ಬಾಂಗ್ಲಾದೇಶವನ್ನು ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುವುದನ್ನು ದೃಢಪಡಿಸಿದೆ ಎಂದು ಹೇಳಿದರು.
ಇದು ನನ್ನ ಜೀವನದ ಅವಿಸ್ಮರಣೀಯ ದಿನಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮಕ್ಕೆ ಬಾಂಗ್ಲಾದೇಶ ನನ್ನನ್ನು ಆಹ್ವಾನಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಶೇಖ್ ಮುಜೀಬುರ್ ರೆಹಮಾನ್ ಅವರನ್ನು ಗಾಂಧಿ ಶಾಂತಿ ಪ್ರಶಸ್ತಿಯೊಂದಿಗೆ ಗೌರವಿಸುವುದು ನಮಗೆ ಸಿಕ್ಕ ಹೆಮ್ಮೆಯ ಅವಕಾಶ ಎಂದು ಮೋದಿ ಕೊಂಡಾಡಿದರು.
ಗಾಂಧಿ ಶಾಂತಿ ಗೌರವದ ಪ್ರಶಸ್ತಿ, ಫಲಕ ಮತ್ತು ಶಾಲನ್ನು ಪ್ರಧಾನಿ ಹಸೀನಾ ಮತ್ತು ಅವರ ಸಹೋದರಿ ರೆಹಾನಾ ಮೂಲಕ ಬಂಗಬಂಧುವಿಗೆ ಪ್ರಧಾನಿ ಮೋದಿ ಹಸ್ತಾಂತರಿಸಿದರು.