ನವದೆಹಲಿ: ಶ್ರೀಲಂಕಾ ಸಂಸತ್ ಚುನಾವಣೆಯಲ್ಲಿ ಮಹಿಂದ್ ರಾಜಪಕ್ಸೆ ಭರ್ಜರಿ ಗೆಲುವಿನತ್ತ ಮುನ್ನಡೆದಿದ್ದಾರೆ. ಆರಂಭಿಕ ಫಲಿತಾಂಶಗಳು ಅವರ ಪಕ್ಷ ಭಾರಿ ಬಹುಮತ ಪಡೆಯುವ ಎಲ್ಲ ಲಕ್ಷಣಗಳನ್ನು ತೋರಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಹವರ್ತಿ ಲಂಕಾ ಪ್ರಧಾನಿಗೆ ಪಿಎಂ ಮೋದಿ ಶುಭಾಶಯ ಕೋರಿದ್ದಾರೆ.
ಎರಡು ಬಾರಿ ಮುಂದೂಡಿಕೆ ಆಗಿದ್ದ ಶ್ರೀಲಂಕಾದ ಸಂಸತ್ ಚುನಾವಣೆ ಅಂತಿಮವಾಗಿ ಮೊನ್ನೆಯಷ್ಟೇ ನಡೆದಿತ್ತು. ಅದರ ಮತ ಎಣಿಕೆ ನಿನ್ನೆಯಿಂದ ಆರಂಭವಾಗಿದ್ದು, ಇಂದು ಅಂತಿಮ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಆರಂಭಿಕ ಟ್ರೆಂಡ್ ಪ್ರಕಾರ ಮಹಿಂದ ರಾಜಪಕ್ಸೆ ಪಕ್ಷ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಕಲ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಾಜಪಕ್ಸೆ ಅವರನ್ನು ಅಭಿನಂದಿಸಿದ್ದು, ಕೋವಿಡ್ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಚುನಾವಣೆ ಆಯೋಜಿಸಿದ್ದಕ್ಕೆ ಅಲ್ಲಿನ ಚುನಾವಣಾ ಆಯೋಗವನ್ನ ಪ್ರಧಾನಿ ಶ್ಲಾಘಿಸಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಪ್ರಕಟಣೆಯಲ್ಲಿ ತಿಳಿಸಿದೆ.