ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರೂ, ಪಂಜ್‍ಶೀರ್ ಕಣಿವೆ ಇನ್ನೂ ತಾಲಿಬಾನಿಗಳ ಕೈವಶವಾಗಿಲ್ಲ. ಹೀಗಾಗಿ ಪಂಜ್‍ಶೀರ್ ಮೂರು ಪ್ರಾಂತ್ಯಗಳನ್ನು ವಶ ಪಡೆಯಲು ತಾಲಿಬಾನ್ ಹರಸಾಹಸ ಪಡುತ್ತಿದೆ. ಆದ್ರೆ ಪಂಜಶೀರ್ ಮಾತ್ರ ತಾಲಿಬಾನಿಗಳಿಗೆ ಸೆಡ್ಡು ಹೊಡೆದು, ಯುದ್ಧಕ್ಕೆ ನಿಂತಿದೆ.
ಪಂಜಶೀರ್ ಮತ್ತು ತಾಲಿಬಾನಿಗಳ ಮಧ್ಯೆ ಈಗಾಗಲೇ ಸಂಘರ್ಷ ಆರಂಭವಾಗಿದೆ. ದೇಶವನ್ನು ವಶಕ್ಕೆ ಪಡೆದಿರುವ ಉಗ್ರರಿಗೆ ಪಂಜಶೀರ್ ಭಯ ಹುಟ್ಟಿಸಿದೆ. ತಾಲಿಬಾನ್ನ ಬಾನು ಜಿಲ್ಲಾ ಮುಖ್ಯಸ್ಥ ಸೇರಿದಂತೆ 50 ತಾಲಿಬಾನಿಗಳನ್ನು ಪಂಜಶೀರ್ ಸೇನೆ ಕೊಂದಿದೆ. ಜೊತೆಗೆ ಸುಮಾರು 20 ತಾಲಿಬಾನಿಗಳನ್ನು ಸೆರೆ ಹಿಡಿದಿದೆ. ಈ ಬಗ್ಗೆ ಪಂಜ್‌ಶೀರ್ ಪ್ರಾಂತ್ಯ ಅಧಿಕೃತವಾಗಿ ಟ್ವೀಟ್ ಮಾಡಿದೆ.
ಇದಕ್ಕೂ ಮೊದಲು, ಬಾಗ್ಲಾನ್ ಪ್ರಾಂತ್ಯದಲ್ಲಿ ಅಫ್ಘಾನ್ ಪಡೆಗಳು 300 ತಾಲಿಬಾನಿಗಳನ್ನು ಕೊಂದಿದ್ದವು. ಈ ಬಗ್ಗೆ ಬಿಬಿಸಿ ಪತ್ರಕರ್ತರೊಬ್ಬರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ತಾಲಿಬಾನ್ ಭಯೋತ್ಪಾದಕರು ಈಗ ಪಂಜ್‌ಶೀರ್ ಕಣಿವೆಯತ್ತ ಹೊರಟಿದ್ದಾರೆ. ಇದು ಈಗ ಪ್ರತಿರೋಧದ ಕೇಂದ್ರವಾಗಿ ಮಾರ್ಪಟ್ಟಿದೆ. ಮಾಜಿ ಮುಜಾಹಿದ್ದೀನ್ ಕಮಾಂಡರ್ ಅಹ್ಮದ್ ಶಾ ಮಸೂದ್ ಪುತ್ರ ಅಹ್ಮದ್ ಮಸೂದ್, ಅಫ್ಘಾನಿಸ್ತಾನ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಹಾಗು ಅಫ್ಘನ್ ಸರ್ಕಾರದ ಪಡೆಗಳು ಪಂಜ್‌ಶೀರ್ ಕಣಿವೆಯಲ್ಲಿ ಅಫ್ಘಾನಿಸ್ತಾನವನ್ನು ಇಸ್ಲಾಮಿಸ್ಟ್ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿರೋಧವನ್ನು ಆರಂಭಿಸಿವೆ.
1980 ಮತ್ತು 1990ರ ದಶಕದಲ್ಲಿ ಸೋವಿಯತ್ ಪಡೆಗಳು ಮತ್ತು ತಾಲಿಬಾನ್‌ಗಳನ್ನು ಪಂಜಶೀರ್‌ನಿಂದ ಹಿಮ್ಮೆಟ್ಟಿಸಲಾಯಿತು. ತಾಲಿಬಾನ್ ವಿರೋಧಿ ಪಡೆಯ ಯೋಧರು ಪಂಜ್ಶೀರ್ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳಲು ಬಂದ ನೂರಾರು ತಾಲಿಬಾನಿ ಬಂಡುಕೋರರನ್ನು ಹೊಡೆದುರುಳಿಸಿದರು. ತಾಲಿಬಾನಿ ಮುಖಂಡರು ತಮ್ಮ ನೂರಾರು ಪಡೆಗಳನ್ನು ಪಂಜ್ಶೀರ್ ನತ್ತ ರವಾನಿಸುತ್ತಿದ್ದಾರೆ.
ಅಫ್ಘಾನಿಸ್ಥಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಮತ್ತು ಅಹ್ಮದ್ ಶಾ ಮಸೌದ್ ಪುತ್ರ ಅಹ್ಮದ್ ಮಸೌದ್ ಅವರನ್ನು ನಿರಾಶ್ರಿತರ ಶಿಬಿರದಲ್ಲಿ ಇಡಲಾಗಿದೆ. ಈಗಾಗಲೇ ತಾಲಿಬಾನ್ ಪಂಜ್ ಶೀರ್ ಪ್ರಾಂತ್ಯವನ್ನು ಎಲ್ಲ ಕಡೆಯಿಂದಲೂ ಸುತ್ತುವರೆದಿದೆ. ಏತನ್ಮಧ್ಯೆ, ಟ್ವಿಟ್ಟರ್ನಲ್ಲಿ ತಾಲಿಬಾನ್ ವಿರೋಧಿ ಚರ್ಚೆ ಟ್ರೆಂಡ್ ಆಗಿದೆ. ಇದಕ್ಕೆ ಹಲವಾರು ಪರ ವಿರೋಧಗಳು ವ್ಯಕ್ತವಾಗಿವೆ.
ಓದಿ:ಪಂಜ ಶೀರ್ ಕೋಟೆಯತ್ತ ತಾಲಿಬಾನ್ : ವಿರೋಧಿ ಕೂಟಕ್ಕೆ ಉಗ್ರ ದಾಳಿಯ ಎಚ್ಚರಿಕೆ