ನವದೆಹಲಿ: 2019ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಯುದ್ಧ ವಿಮಾನ ಎಫ್-16 ಅನ್ನು ಅಭಿನಂದನ್ ವರ್ಧಮಾನ್ ಹೊಡೆದುರುಳಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಪಾಕ್ ಯುದ್ಧ ವಿಮಾನ ಎಫ್-16 ಅನ್ನು ಹೊಡೆದುರುಳಿಸಿದ್ದ ಅಭಿನಂದನ್ ಅವರಿಗೆ ಕೇಂದ್ರ ಸರ್ಕಾರ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರಪತಿ ನಿನ್ನೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಆದರೆ ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಪಾಕ್, ವರ್ಧಮಾನ್ ನಮ್ಮ ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಪ್ರತಿಕ್ರಿಯಿಸಿದೆ. ಪಾಕ್‌ನ ವಿದೇಶಾಂಗ ಸಚಿವಾಲಯ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದೆ.
ಪಾಕ್ ಪ್ರಕಟಣೆಯ ವಿವರ:
'2019ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಎಫ್-16 ಯುದ್ಧ ವಿಮಾನವನ್ನು ತಮ್ಮ ಪೈಲಟ್ ಹೊಡೆದುರುಳಿಸಿದ್ದಾರೆ ಎಂದು ಹೇಳುತ್ತಿರುವ ಭಾರತದ ವಾದವನ್ನು ಪಾಕಿಸ್ತಾನ ಖಂಡಿಸುತ್ತದೆ. ಆ ದಿನ ಯಾವುದೇ ರೀತಿಯ ವಿಮಾನ ನೆಲಕ್ಕೆ ಬಿದ್ದಿಲ್ಲ ಎಂದು ಅಂತಾರಾಷ್ಟ್ರೀಯ ತಜ್ಞರು, ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬಾಲಾಕೋಟ್ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ನಡೆಸಿದ್ದ ದಾಳಿಯ ಬಳಿಕ ತಮ್ಮ ಗಡಿಯೊಳಗೆ ಸಿಕ್ಕ ಭಾರತೀಯ ಪೈಲಟ್ ಅನ್ನು ಬಿಡುಗಡೆ ಮಾಡುವ ಮೂಲಕ ಪಾಕ್ ಶಾಂತಿಪ್ರಿಯ ರಾಷ್ಟ್ರ ಎಂಬುದಕ್ಕೆ ಸಾಕ್ಷಿಯಾಗಿದೆ' ಎಂದು ಹೇಳಿದೆ.
2019ರ ಫೆಬ್ರವರಿ 26 ರಂದು ಬೆಳಿಗ್ಗೆ ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮಹಮ್ಮದ್ ಉಗ್ರಗಾಮಿ ನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿತ್ತು. ಇದಾದ ನಂತರ, 2019ರ ಫೆಬ್ರವರಿ 27 ರಂದು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‌ಗೆ ಸೇರಿದ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದರು.
ಇದಾದ ವೇಳೆ, ಭಾರತದ ಮಿಗ್-21 ಫೈಟರ್ ಜೆಟ್ ಪಾಕಿಸ್ತಾನದ ನೆಲದಲ್ಲಿ ಪತನಗೊಂಡಿತ್ತು. ವರ್ಧಮಾನ್ ಅವರನ್ನು ಪಾಕಿಸ್ತಾನ ಬಂಧಿಸಿ ಚಿತ್ರಹಿಂಸೆ ನೀಡಿತ್ತು. ಎರಡು ದೇಶಗಳ ವಿದೇಶಾಂಗ ಸಚಿವಾಲಯಗಳ ಮಾತುಕತೆ, ಅಂತರಾಷ್ಟ್ರೀಯ ಮಟ್ಟದ ತೀವ್ರ ಒತ್ತಡದ ಬಳಿಕ ಮಾರ್ಚ್ 1ರ ರಾತ್ರಿ ಅಭಿನಂದನ್ ಅವರನ್ನು ಪಾಕ್ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ:Watch: 'ಯುದ್ಧ ವೀರ' ಅಭಿನಂದನ್ ವರ್ಧಮಾನ್ಗೆ 'ವೀರ ಚಕ್ರ' ಪ್ರಶಸ್ತಿ ಪ್ರದಾನ