ಇಸ್ಲಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಉದ್ರಿಕ್ತ ಜನಸಮೂಹವೊಂದು ಹಿಂದೂ ಸಂತನ ದೇವಾಲಯವನ್ನು ಕಳೆದೆರಡು ದಿನಗಳ ಹಿಂದೆ ಧ್ವಂಸಗೊಳಿಸಿದೆ. ಈ ದೇವಾಲಯವನ್ನು ಪುನಃ ನಿರ್ಮಿಸಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.
ಖೈಬರ್ ಪಖ್ತುನ್ಖ್ವಾ ಪ್ರದೇಶದಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಆ ಪ್ರಾಂತ್ಯದ ಮುಖ್ಯಮಂತ್ರಿ ಖಾನ್, ಕರಕ್ ಜಿಲ್ಲೆಯಲ್ಲಿ ಧ್ವಂಸಗೊಂಡ ಹಿಂದೂ ದೇವಾಲಯದ ಪುನರ್ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ, ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಲಾಗುವುದು. ದೇವಾಲಯದ ಮೇಲೆ ದಾಳಿ ಮಾಡಿದ ಹಲವಾರು ಶಂಕಿತರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ತಿಳಿಸಿದರು.
ಹಾನಿಗೊಳಗಾದ ದೇವಾಲಯವನ್ನು ಪುನರ್ನಿರ್ಮಿಸಲು ಪ್ರಾಂತೀಯ ಸರ್ಕಾರವು ಅಧಿಕಾರಿಗಳಿಗೆ ಆದೇಶಿಸಿದೆ ಎಂದು ಮುಖ್ಯಮಂತ್ರಿ ಖಾನ್ ಅವರ ಮಾಹಿತಿ ವಿಶೇಷ ಸಹಾಯಕ ಮತ್ತು ಕೆಪಿ ಸರ್ಕಾರದ ವಕ್ತಾರ ಕಮ್ರಾನ್ ಬಂಗಾಶ್ ಹೇಳಿದ್ದಾರೆ. ದೇವಾಲಯದ ಪುನರ್ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಬಂಗಾಶ್ ತಿಳಿಸಿದ್ದಾರೆ.
ಓದಿ:ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ: 1997ರ ನಂತರ ನಡೆದ 2ನೇ ಅತಿ ದೊಡ್ಡ ದಾಳಿ!
ಹಿಂದೂ ದೇವಾಲಯದ ಮೇಲಿನ ದಾಳಿಯ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ್ದು, ಸ್ಥಳೀಯ ಅಧಿಕಾರಿಗಳಿಗೆ ಜನವರಿ 5 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಸುಪ್ರೀಂಕೋರ್ಟ್ ಹೇಳಿಕೆಯ ಪ್ರಕಾರ, ಹಿಂದೂ ಶಾಸಕರು ಮತ್ತು ಪಾಕಿಸ್ತಾನ ಹಿಂದೂ ಕೌನ್ಸಿಲ್ ಮುಖ್ಯಸ್ಥ ರಮೇಶ್ ಕುಮಾರ್ ವಂಕ್ವಾನಿ ಅವರು ಕರಾಚಿಯಲ್ಲಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಇದೊಂದು ದುರಂತ ಘಟನೆ ಎಂದು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅದಲ್ಲದೆ, ಸಂಸತ್ತಿನ ಸದಸ್ಯರಿಗೆ ಈ ವಿಷಯದ ಬಗ್ಗೆ ಅರಿವು ಮೂಡಿಸಿದ್ದು, ಜನವರಿ 5 ರಂದು ಇಸ್ಲಾಮಾಬಾದ್ನಲ್ಲಿ ನ್ಯಾಯಾಲಯದ ಮುಂದೆ ಈ ವಿಷಯವನ್ನು ಪರಿಹರಿಸಲಿದ್ದೇವೆ ಎಂದು ತಿಳಿಸಲಾಗಿದೆ.
ಪಾಕಿಸ್ತಾನದ ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಮುಖ್ಯ ಕಾರ್ಯದರ್ಶಿ ಮತ್ತು ಕೆಪಿಯ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅವರಿಗೆ ಜನವರಿ 4 ರಂದು ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಸಮುದಾಯದ ಪ್ರಕಾರ, ದೇಶದಲ್ಲಿ 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಇಲ್ಲಿನ ಹಿಂದೂಗಳು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಂಡು ಕೊಂಚ ಮಟ್ಟಿಗೆ ಅನ್ಯೋನ್ಯವಾಗಿದ್ದಾರೆ ಎನ್ನಲಾಗಿದ್ದರೂ ಸಹ ಈ ಭಾಗದಲ್ಲಿ ಉಗ್ರರ ಉಪಟಳ ಹೆಚ್ಚಿದೆ ಎಂದು ವರದಿಗಳು ಹೇಳುತ್ತವೆ.