ಇಸ್ಲಾಮಾಬಾದ್(ಪಾಕಿಸ್ತಾನ):ಅಕ್ರಮವಾಗಿ ಕಚ್ಚಾ ತೈಲ ವ್ಯವಹಾರ ನಡೆಸುವ ಮೂಲಕ ಪಾಕಿಸ್ತಾನದ ನಿವೃತ್ತ ಜನರಲ್ ತಮ್ಮ ದೇಶದ ಖಜಾನೆಗೆ ದಿನಕ್ಕೆ ಸುಮಾರು 20 ಮಿಲಿಯನ್ ರೂಪಾಯಿ ನಷ್ಟವಾಗುವಂತೆ ಮಾಡುತ್ತಿದ್ದಾರೆ ಎಂಬ ಆರೋಪದ ದೂರಿನ ತನಿಖೆಯನ್ನು ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾದ ಎನ್ಎಬಿ(National Accountability Bureau) ಆರಂಭಿಸಿದೆ.
ನಿವೃತ್ತ ಜನರಲ್ ಅಹ್ಸಾನ್ ಸಲೀಂ ಹಯಾತ್ ಮತ್ತು ಲಾಜಿಸ್ಟಿಕ್ಸ್ ಕಂಪನಿಯೊಂದರ ಹಿರಿಯ ಅಧಿಕಾರಿಗಳ ವಿರುದ್ಧ ಮಾಜಿ ಸೇನಾಧಿಕಾರಿಯಾದ ಅಕ್ರಂ ರಾಝಾ ಆರೋಪ ಮಾಡಿದ್ದಾರೆ. ಇದೇ ಪ್ರಕರಣದ ತನಿಖೆಯನ್ನು ಎನ್ಎಬಿ ಈಗ ಆರಂಭಿಸಿದೆ. ಅಕ್ರಂ ರಾಝಾ ಅವರು ನಿವೃತ್ತ ಮೇಜರ್ ಆಗಿದ್ದಾರೆ.
ಅಕ್ರಂ ರಾಝಾ ಅವರು ಸಲ್ಲಿಸಿದ್ದ ದೂರಿನಲ್ಲಿರುವ ದಾಖಲೆಗಳ ಪ್ರಕಾರ ಇಬ್ಬರು ಲೆಫ್ಟಿನೆಂಟ್ ಕರ್ನಲ್‌ಗಳು, ಮೂವರು ಮೇಜರ್‌ಗಳು, ವಿವಿಧ ಶ್ರೇಣಿಯ ಆರು ಸೈನಿಕರು ಮತ್ತು ನಾಲ್ವರು ನಾಗರಿಕರು ಸೇರಿದಂತೆ 17 ವ್ಯಕ್ತಿಗಳು ಈ ತೈಲ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜನವರಿ 26, 2005ರಂದು ಅವರನ್ನು ವಜಾಗೊಳಿಸಲಾಗಿದೆ. ಆದರೆ ಮುಖ್ಯ ಆರೋಪಿಯಾದ ನಿವೃತ್ತ ಜನರಲ್ ಅಹ್ಸಾನ್ ಸಲೀಂ ಹಯಾತ್ ಅವರನ್ನು ವಜಾಗೊಳಿಸಿಲ್ಲ ಎಂದು ಉಲ್ಲೇಖಿಸಲಾಗಿದೆ.