ಬಿಶ್ಕೇಕ್: ಕಿರ್ಗಿಸ್ತಾನದ ರಾಜಧಾನಿ ಬಿಶ್ಕೇಕ್ನಲ್ಲಿ ನಡೆಯುತ್ತಿರುವ ಶಾಂಘೈ ಕೊಆಪರೇಷನ್ ಆರ್ಗನೈಸೇಷನ್ ಸಮಿತ್ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶಿಷ್ಟಾಚಾರ ಉಲ್ಲಂಘಿಸಿರುವುದು ವರದಿಯಾಗಿದೆ.
ನಿನ್ನೆ ಎಸ್ಸಿಒ ಸಮಿತ್ನ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಆಗಮಿಸುವ ವೇಳೆ, ಸಭೆಯಲ್ಲಿದ್ದವರೆಲ್ಲ ಎದ್ದು ನಿಂತು ಗೌರವ ಸಲ್ಲಿಸಿದರು. ಆದರೆ ಇಮ್ರಾನ್ ಮಾತ್ರ ಕುಳಿತೇ ಇದ್ದರು. ಈ ವಿಡಿಯೋವನ್ನು ಅವರದೇ ಪಕ್ಷ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಸಮಾರಂಭಕ್ಕೆ ಗಣ್ಯರ ಜನತೆ ಸರತಿಯಲ್ಲಿ ಆಗಮಿಸಿದ ಇಮ್ರಾನ್ ನೇರವಾಗಿ ತಮ್ಮ ಆಸನದಲ್ಲಿ ಕುಳಿತುಕೊಂಡರು. ಆದರೆ ಇಡೀ ಸಭೆ ಇತರ ನಾಯಕರ ಆಗಮನಕ್ಕೆ ಎದ್ದು ನಿಂತು ಗೌರವ ಸಲ್ಲಿಸುತ್ತಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಎದ್ದು ನಿಂತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಎಲ್ಲರೂ ನಿಂತಿರುವುದನ್ನು ಗಮನಿಸಿದ ಇಮ್ರಾನ್, ಕಾಟಾಚಾರಕ್ಕೆ ಎಂಬಂತೆ ತಮ್ಮ ಹೆಸರು ಕೂಗಿದಾಗ ಕ್ಷಣಕಾಲ ಎದ್ದು ನಿಲ್ಲುತ್ತಾರೆ. ಆನಂತರ ಕುರ್ಚಿಗೆ ಅಂಟಿಕೊಂಡವರಂತೆ ಕುಳಿತುಕೊಳ್ತಾರೆ.
ಇತ್ತೀಚೆಗೆ 14ನೇ ಇಸ್ಲಾಮಿಕ್ ದೇಶಗಳ ಒಕ್ಕೂಟ ಸಭೆಯಲ್ಲಿಯೂ ಇಮ್ರಾನ್ ಶಿಷ್ಟಾಚಾರ ಉಲ್ಲಂಘಿಸಿದ್ದರು. ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರೊಂದಿಗಿನ ಸಭೆಯಲ್ಲಿ ತಮ್ಮ ಪಾಡಿಗೆ ತಾವು ಮಾತನಾಡಿ ಇಮ್ರಾನ್ ತೆರಳಿದ್ದರು. ಅವರು ಏನು ಹೇಳಿದರೆಂದು ತರ್ಜುಮೆ ಮಾಡಿ ಹೇಳುವ ಮುನ್ನವೇ ಅವರು ವೇದಿಕೆಯಿಂದ ನಿರ್ಗಮಿಸಿ ಆಗಿತ್ತು. ಇಮ್ರಾನ್ ನಡೆಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.