ಇಸ್ಲಾಮಾಬಾದ್:ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಉಚ್ಛಾಟಿಸಲು 'ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿ' ಎಂಬ ಹೊಸ ಮೈತ್ರಿ ರೂಪಿಸಲು ಒಗ್ಗೂಡಿರುವುದಾಗಿ ಪಾಕಿಸ್ತಾನದ ಪ್ರತಿಪಕ್ಷಗಳು ಪ್ರಕಟಿಸಿವೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಬಹು-ಪಕ್ಷ ಸಮ್ಮೇಳನದ ನಂತರ ಮೈತ್ರಿಕೂಟದ ಒಮ್ಮತ ಬಂದಿದೆ. ಅಲ್ಲಿನ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮಿಯತ್ ಉಲೆಮಾ-ಇ-ಇಸ್ಲಾಂ (ಎಫ್) (ಜೆಯುಐ-ಎಫ್) ಮುಖ್ಯಸ್ಥ ಮೌಲಾನಾ ಫಝಲ್-ಉರ್-ರೆಹಮಾನ್, ಚುನಾಯಿತ ಪ್ರಧಾನಿ ಇಮ್ರಾನ್ ಅಹ್ಮದ್ ನಿಯಾಜಿ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ ಎಂದು ಹೇಳಿದ್ದಾರೆ.
ಅಕ್ಟೋಬರ್‌ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯಲಿದ್ದು, ವಕೀಲರು, ವ್ಯಾಪಾರಿಗಳು, ಕಾರ್ಮಿಕರು, ರೈತರು ಮತ್ತು ನಾಗರಿಕ ಸಮಾಜ ಕೂಡ ಇದರ ಭಾಗವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಚುನಾಯಿತ ಸರ್ಕಾರವನ್ನು ಉಚ್ಛಾಟಿಸಲು ಜಂಟಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮತ್ತು ಸಂಸತ್ತಿಗೆ ರಾಜೀನಾಮೆ ಸೇರಿದಂತೆ ಎಲ್ಲಾ ತಂತ್ರಗಳನ್ನು ಬಳಸುತ್ತವೆ ಎಂದು ಹೇಳಿದ್ದಾರೆ.