ಇಸ್ಲಾಮಾಬಾದ್:ಅಮೆರಿಕಗೆ ಬೆಂಬಲ ನೀಡಿರುವುದು ಭಯೋತ್ಪಾದನೆಗೆ ಬೆಂಬಲ ನೀಡಿದಷ್ಟು ನಮಗೆ ಅವಮಾನವೇನಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ಖಾನ್ ಹೇಳಿದ್ದಾರೆ. ಪಾಕಿಸ್ತಾನವು ಶಾಂತಿಯುತವಾಗಿ ಅಮೆರಿಕದೊಂದಿಗೆ ಸ್ನೇಹ ಬೆಳೆಸಲು ಇಚ್ಛಿಸುತ್ತದೆಯೇ ಹೊರತು, ಸಂಘರ್ಷಕ್ಕೆ ಇಳಿಯಲ್ಲ ಎಂದು ರಾಷ್ಟ್ರೀಯ ಅಸೆಂಬ್ಲಿಯ ಬಜೆಟ್ ಅಧಿವೇಶನದಲ್ಲಿ ಪಾಕ್ ಪ್ರಧಾನಿ ಹೇಳಿದ್ದಾರೆ.
ನಾವು ಅಮೆರಿಕಗೆ ಅನೇಕ ಸಹಾಯ ಮಾಡಿದರೂ, ಅವರು ನಮ್ಮನ್ನು ಹೊಗಳಲಿಲ್ಲ ಅಥವಾ ನಮ್ಮ ಸೇವೆಗೆ ಮೆಚ್ಚುಗೆ ಸೂಚಿಸಿಲ್ಲ. ಬದಲಾಗಿ ನಮ್ಮನ್ನು ದ್ರೋಹಿಗಳು ಎಂದೇ ದೂಷಿಸುತ್ತಿದ್ದಾರೆ. ಇಷ್ಟರ ಮಧ್ಯೆಯೂ ಭಯೋತ್ಪಾದನೆ ವಿರುದ್ಧದ ಅಮೆರಿಕದ ಹೋರಾಟದಲ್ಲಿ ಮುಂಚೂಣಿಯಲ್ಲಿರಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಖಾನ್.
ಯಾವುದೇ ದೇಶವು ಯುದ್ಧದಲ್ಲಿ ಭಾಗಿಯಾಗಿ 70 ಸಾವಿರ ಜೀವಗಳನ್ನು ಕಳೆದುಕೊಳ್ಳುತ್ತದೆಯೇ? ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಾಕ್ಗೆ ತುಂಬಾ ಕಠಿಣ ಸಮಯ ಬರಲಿದೆ ಎಂದು ಖಾನ್ ಎಚ್ಚರಿಸಿದ್ದಾರೆ. ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನಕ್ಕೆ ಸೇರಿದ ಸುಮಾರು 5 ಸಾವಿರ ಭಯೋತ್ಪಾದಕರು ನೆರೆಯ ದೇಶದಲ್ಲಿದ್ದುಕೊಂಡು ತನ್ನ ಭದ್ರತೆಗೆ ಅಪಾಯವನ್ನು ಉಂಟು ಮಾಡುತ್ತಿದೆ ಎಂಬ ಅಂಶವನ್ನು ಇಮ್ರಾನ್ ಖಾನ್ ಬಯಲಿಗೆ ಎಳೆದಿದ್ದಾರೆ.