ಇಸ್ಲಾಮಾಬಾದ್: ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ ಲಸಿಕೆ ನೀಡುವ ಸಮಗ್ರ ಯೋಜನೆಯನ್ನು ಮುಂದಿನ ವಾರದಿಂದ ಪಾಕಿಸ್ತಾನ ಆರಂಭಿಸಲಿದ್ದು, ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (ಎನ್‌ಸಿಒಸಿ) ಅನಾವರಣಗೊಳಿಸುವುದರೊಂದಿಗೆ ಅಭಿಯಾನ ಆರಂಭವಾಗಲಿದೆ.
ಪಾಕಿಸ್ತಾನ ಯೋಜನಾ ಸಚಿವ ಅಸಾದ್ ಉಮರ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಕೊರೊನಾ ಲಸಿಕೆ ನೀಡಲಾಗುತ್ತದೆ. ದೇವರ ಇಚ್ಛೆಯಂತೆ ಮುಂದಿನ ವಾರವೇ ವ್ಯಾಕ್ಸಿನೇಷನ್ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ನೂರಾರು ವ್ಯಾಕ್ಸಿನೇಷನ್ ಕೇಂದ್ರಗಳು ಕೋವಿಡ್ ಲಸಿಕೆ ನೀಡಲಿವೆ. ಮುಂದಿನ ವಾರ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ಅಸಾದ್ ಉಮರ್ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಚೀನಾದ ಸಿನೋಫಾರ್ಮ್ ತಯಾರಿಸಿದ ಲಸಿಕೆಯ 5 ಲಕ್ಷ ಡೋಸ್ಗಳನ್ನು ನೀಡುವುದಾಗಿ ಹೇಳಿದ ಬಳಿಕ ಪಾಕಿಸ್ತಾನದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಲಸಿಕೆಗಳ ಮೊದಲ ಬ್ಯಾಚ್ ಶನಿವಾರದೊಳಗೆ ಪಾಕಿಸ್ತಾನಕ್ಕೆ ಬರಲಿದೆ.