ಇಸ್ಲಾಮಾಬಾದ್(ಪಾಕಿಸ್ತಾನ) :ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಮೊದಲ ಒಪ್ಪಂದವು ಜಾರಿಗೆ ಬಂದಂತೆ ಭಾರತವು ಈ ಒಪ್ಪಂದವನ್ನು ಬೆಂಬಲಿಸುತ್ತದೆ ಮತ್ತು ಅದರ ಎಲ್ಲ ಕಟ್ಟುಪಾಡುಗಳಿಗೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿಕೆ ನೀಡಿರುವ ಭಾರತದ ವಿರುದ್ಧ ಪಾಕ್ ವಾಗ್ದಾಳಿ ನಡೆಸಿದೆ.
ಜಿನೀವಾದಲ್ಲಿ ನಡೆಯುತ್ತಿರುವ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿರುವ ಪಾಕಿಸ್ತಾನದ ರಾಯಭಾರಿ ಮೊಹಮ್ಮದ್ ಒಮರ್, ಭಾರತದ ಈ ಹೇಳಿಕೆ ಸಂಶಯಾಸ್ಪದವಾಗಿದೆ. ದಕ್ಷಿಣ ಏಷ್ಯಾದಲ್ಲಿ ಪರಮಾಣು ಪ್ರವರ್ತಕ ಆಗಿ ಭಾರತ ಬೆಳೆಯುತ್ತಿದೆ ಎಂದಿದೆ.
1974ರಲ್ಲಿ ಮೊದಲ ಸಲ ಪರಮಾಣು ಪರೀಕ್ಷೆ ನಡೆಸುವ ಮೂಲಕ ಭಾರತ ಈ ಒಪ್ಪಂದದ ಮಾನದಂಡ ಮುರಿದಿದೆ. ಇದರ ಬೆನ್ನಲ್ಲೇ 1998ರಲ್ಲಿ ಮತ್ತೊಮ್ಮೆ ಪರಮಾಣು ಪರೀಕ್ಷೆ ನಡೆಸಿದೆ ಎಂದು ಆರೋಪಿಸಿದೆ. ಪರಮಾಣು ವಸ್ತುಗಳನ್ನ ಬೇರೆಡೆ ರವಾನಿಸುವ ಮೂಲಕ ಭಾರತ ಈ ಪರೀಕ್ಷೆ ನಡೆಸಿದೆ. ಈ ಮೂಲಕ ರಕ್ಷಣಾತ್ಮಕ ಬದ್ಧತೆ ಉಲ್ಲಂಘನೆ ಮಾಡಿದೆ ಎಂದು ವಾಗ್ದಾಳಿ ನಡೆಸಿದೆ.
ಕಳೆದ ಕೆಲ ದಿನಗಳ ಹಿಂದೆ ಈ ವಿಷಯವಾಗಿ ಮಾತನಾಡಿದ್ದ ಭಾರತೀಯ ರಾಯಭಾರಿ ಪಂಕಜ್ ಶರ್ಮಾ, ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ವ್ಯವಸ್ಥೆ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ.
ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದರು. ಜೊತೆಗೆ ಪರಮಾಣು ಶಸ್ತ್ರಾಸ್ತ್ರ ರಹಿತ ಪ್ರಪಂಚದ ಉದ್ದೇಶಕ್ಕಾಗಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಹೇಳಿತ್ತು.